ADVERTISEMENT

ಕೋಲಾರ | ಮಾವು ಮಾರುಕಟ್ಟೆ ಆರಂಭ: ರೈತರಿಗೆ ಖುಷಿ

ಗೊಂದಲ ನಿವಾರಣೆ: ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 14:35 IST
Last Updated 26 ಮೇ 2020, 14:35 IST
ಸಿ.ಎಸ್‌.ವೆಂಕಟೇಶ್‌
ಸಿ.ಎಸ್‌.ವೆಂಕಟೇಶ್‌   

ಕೋಲಾರ: ‘ಜಿಲ್ಲೆಯಲ್ಲಿ ಮಾವು ಸುಗ್ಗಿ ಆರಂಭವಾಗಿದ್ದು, ಸರ್ಕಾರ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಗೊಂದಲ ನಿವಾರಿಸಿ ಮಾವು ಮಾರುಕಟ್ಟೆ ಆರಂಭಕ್ಕೆ ಮುಂದಾಗಿರುವುದು ರೈತರಿಗೆ ಖುಷಿ ತಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ವೆಂಕಟೇಶ್ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶ್ರೀನಿವಾಸಪುರದಲ್ಲಿ ಮಾವು ಮಾರುಕಟ್ಟೆ ಆರಂಭಿಸಿದರೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತದೆ ಎಂಬ ಭಯವಿದೆ. ಮತ್ತೊಂದೆಡೆ ರೈತರು ವರ್ಷವಿಡೀ ಶ್ರಮಪಟ್ಟು ಬೆಳೆದ ಮಾವಿಗೆ ಮಾರುಕಟ್ಟೆ ಸಿಗಲಿಲ್ಲವೆಂದರೆ ತೊಂದರೆಗೆ ಸಿಲುಕುತ್ತಾರೆ’ ಎಂದರು.

‘ಸರ್ಕಾರ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ನಿರ್ಧಾರ ಕೈಗೊಂಡಿದೆ. ಮಾವು ಖರೀದಿಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ವ್ಯಾಪಾರಿಗಳು ಜಿಲ್ಲೆಗೆ ಬರುತ್ತಾರೆ. ಕಾರ್ಮಿಕರು ಸಹ ಹೊರ ರಾಜ್ಯಗಳಿಂದ ಬರುತ್ತಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಕೊರೊನಾ ಸೋಂಕು ಹರಡುವ ಭಯವಿದೆ. ಈ ಹಿನ್ನೆಲೆಯಲ್ಲಿ ಮಾವು ವಹಿವಾಟಿನಿಂದ ಸೋಂಕು ಹೆಚ್ಚಾಗುತ್ತದೆ ಎಂದು ಸರ್ಕಾರಕ್ಕೆ ಮಾಹಿತಿ ರವಾನಿಸಿತ್ತು’ ಎಂದು ವಿವರಿಸಿದರು.

ADVERTISEMENT

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಎಲ್ಲಾ ಗೊಂದಲಗಳ ನಡುವೆ ಮಾವು ಮಾರುಕಟ್ಟೆ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಇದರಿಂದ ಮಾವು ಬೆಳೆಗಾರರ ಆತಂಕ ದೂರವಾಗಿದೆ. ಸೋಂಕು ತಡೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ವ್ಯಾಪಾರಿಗಳು ಮತ್ತು ವಾಹನ ಚಾಲಕರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ನೀರಿನ ಸಮಸ್ಯೆ: ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುತ್ತಿದೆ. ಸದ್ಯ 324 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, ಈ ಪೈಕಿ ಬಂಗಾರಪೇಟೆ ತಾಲ್ಲೂಕಿನ 45 ಗ್ರಾಮ, ಕೆಜಿಎಫ್‌ನ 43, ಶ್ರೀನಿವಾಸಪುರದ 33, ಮುಳಬಾಗಿಲಿನ 46, ಕೋಲಾರದ 92 ಹಾಗೂ ಮಾಲೂರು ತಾಲ್ಲೂಕಿನ 61 ಗ್ರಾಮದಲ್ಲಿ ನೀರಿನ ಸಮಸ್ಯೆಯಿದೆ’ ಎಂದು ಮಾಹಿತಿ ನೀಡಿದರು.

‘ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಕೆಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಧಿಕಾರಿಗಳು ನೀರಿನ ಸಮಸ್ಯೆಗೆ ತುರ್ತಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿದರು.

ರೈತರಿಗೆ ಪರಿಹಾರ: ‘ಲಾಕ್‌ಡೌನ್‌ ಕಾರಣಕ್ಕೆ ಜಿಲ್ಲೆಯಲ್ಲಿ ತರಕಾರಿ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲವಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಇದಕ್ಕೆ ಪರ್ಯಾಯ ಮಾರ್ಗ ಹುಡುಕಿ ರೈತರಿಗೆ ಪರಿಹಾರ ಕೊಡುತ್ತಿದೆ. ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಆದರೆ, ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಿದ್ಧವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.