ADVERTISEMENT

ಸೌಂದರ್ಯ ಕಳೆದುಕೊಂಡ ಬೆಮಲ್‌ ನಗರ

ಪಂಚಾಯಿತಿ ತ್ಯಾಜ್ಯ ನಗರಸಭೆ ವ್ಯಾಪ್ತಿಗೆ l ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಬೇಸರ

ಕೃಷ್ಣಮೂರ್ತಿ
Published 16 ಜನವರಿ 2023, 5:18 IST
Last Updated 16 ಜನವರಿ 2023, 5:18 IST
ಕೆಜಿಎಫ್ ಬೆಮಲ್‌ ನಗರದ ರಸ್ತೆ ಬದಿ ಸುರಿದಿರುವ ತ್ಯಾಜ್ಯ
ಕೆಜಿಎಫ್ ಬೆಮಲ್‌ ನಗರದ ರಸ್ತೆ ಬದಿ ಸುರಿದಿರುವ ತ್ಯಾಜ್ಯ   

ಕೆಜಿಎಫ್: ಒಂದೆಡೆ ನಗರಸಭೆ ವ್ಯಾಪ್ತಿ, ಮತ್ತೊಂದೆಡೆ ಗ್ರಾಮ ಪಂಚಾಯಿತಿ ವ್ಯಾಪ್ತಿ. ಎರಡೂ ವ್ಯಾಪ್ತಿಯ ಅಧಿಕಾರಿಗಳು ಜವಾಬ್ದಾರಿ ಮರೆತ ಕಾರಣ ಒಮ್ಮೆ ಹಸಿರು ವನಗಳಿಂದ ಕಂಗೊಳಿಸುತ್ತಿದ್ದ ಬೆಮಲ್ ನಗರ ಈಗ ಕಸದ ನಗರವಾಗಿ ಮಾರ್ಪಾಡಾಗಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್ ಈಚೆಗೆ ತಾನು ಹೊಂದಿದ್ದ 967 ಎಕರೆ ಜಮೀನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿದ
ಮೇಲೆ ಈ ಪ್ರದೇಶದ ಮೇಲೆ ಬೆಮಲ್ ಹಕ್ಕು ಕಳೆದು ಕೊಂಡಿದೆ.

ತನ್ನ ಸುಪರ್ದಿಯಲ್ಲಿ ಇಲ್ಲದ ಜಾಗದ ಮೇಲೆ ತಾನೇಕೆ ಉಸ್ತುವಾರಿ ವಹಿಸಬೇಕು ಎಂಬ ನಿಲುವಿನಲ್ಲಿ ಬೆಮಲ್ ಇದೆ. ಅನವಶ್ಯಕವಾಗಿ ಆರ್ಥಿಕ ಹೊರೆ ಕೂಡ ತಪ್ಪಿತು ಎಂಬ ದೃಷ್ಟಿಯಲ್ಲಿ ತಾನು ಹಿಂದೆ ಹೊಂದಿದ್ದ ಜಾಗ ತ್ಯಾಜ್ಯ ಸಂಗ್ರಹಾಲಯವಾಗುತ್ತಿದ್ದರೂ ಆಡಳಿತ ಮಂಡಳಿ ಮೌನ ವಹಿಸಿದೆ.

ADVERTISEMENT

ಇದರಿಂದಾಗಿ ಆಲದ ಮರದ ಬಳಿ ಮಾತ್ರ ಸಂಗ್ರಹವಾಗುತ್ತಿದ್ದ ತ್ಯಾಜ್ಯ ಈಗ ರಸ್ತೆ ಎರಡೂ ಬದಿಯಲ್ಲಿ ಕಾಣ
ಸಿಗುತ್ತಿದೆ. ಬೆಮಲ್ ವಿಶ್ವೇಶ್ವರಯ್ಯ ಕಮಾನಿನಿಂದ ಬೆಮಲ್ ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ.

ಒಂದು ಭಾಗ ಬಂಗಾರಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಬರುತ್ತದೆ. ಆಡಳಿತ ದೃಷ್ಟಿಯಿಂದ ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಮತ್ತೊಂದು ಭಾಗ ಕೆಜಿಎಫ್ ವಿಧಾನಸಭೆ ವ್ಯಾಪ್ತಿಗೆ ಬಂದು ರಾಬರ್ಟಸನ್‌ ಪೇಟೆ ನಗರಸಭೆ ವ್ಯಾಪ್ತಿಗೆ ಬರುತ್ತದೆ.

ರಾಬರ್ಟಸನ್ ಪೇಟೆ ನಗರಸಭೆ ವ್ಯಾಪ್ತಿಗೆ ಬರುವ ಬಹುತೇಕ ಪ್ರದೇಶ ಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇಡೀ ಪ್ರದೇಶ ಅನೈರ್ಮಲ್ಯದಿಂದ ಕೂಡಿದೆ.

ದೊಡ್ಡೂರು ಕರಪನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಆಲದ ಮರದ ಬಳಿ ಹಲವು ಹೋಟೆಲ್, ಕೋಳಿ ಮಾಂಸದ ಅಂಗಡಿ, ಬೇಕರಿ, ಪಾನೀಪುರಿ, ತರಕಾರಿ ಅಂಗಡಿಗಳು ಇವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಪದ್ಧತಿ ಇನ್ನೂ ಸಮರ್ಪಕವಾಗಿ ನಡೆಯುತ್ತಿಲ್ಲ. ತ್ಯಾಜ್ಯ ವಿಲೇವಾರಿ ಘಟಕವೂ ಕೆಲಸ ಮಾಡುತ್ತಿಲ್ಲ.

ಇದರಿಂದ ದುರ್ವಾಸನೆ ಬರುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಬೆಮಲ್ ನಗರಸಭೆಗೆ ಇನ್ನೂ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಇದೆ. ಇದರ ವ್ಯಾಪ್ತಿಯಲ್ಲಿ ನಾವೇಕೆ ಕೆಲಸ ಮಾಡಬೇಕು ಎಂಬುದು ನಗರಸಭೆ ಅಧಿಕಾರಿಗಳ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.