ADVERTISEMENT

ವೈ-ಸ್ಪೇಸ್‌ ಕೇಂದ್ರದಿಂದ ಸ್ಥಳೀಯರಿಗೆ ಉದ್ಯೋಗ: ಶರತ್‌ ಬಚ್ಚೇಗೌಡ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನಲ್ಲಿ ‘ಮಿನಿ ನಗರ’ ನಿರ್ಮಾಣಕ್ಕೆ ಗಣ್ಯರಿಂದ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:04 IST
Last Updated 7 ಅಕ್ಟೋಬರ್ 2025, 2:04 IST
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಬಳಿ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ವೈ–ಸ್ಪೇಸ್‌ ಸಂಸ್ಥೆಯ ಮೂಲಸೌಕರ್ಯ ಕೇಂದ್ರ ನಿರ್ಮಾಣಕ್ಕೆ ಗಣ್ಯರು ಭೂಮಿಪೂಜೆ ನೆರವೇರಿಸಿದರು
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಬಳಿ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ವೈ–ಸ್ಪೇಸ್‌ ಸಂಸ್ಥೆಯ ಮೂಲಸೌಕರ್ಯ ಕೇಂದ್ರ ನಿರ್ಮಾಣಕ್ಕೆ ಗಣ್ಯರು ಭೂಮಿಪೂಜೆ ನೆರವೇರಿಸಿದರು   

ಬಂಗಾರಪೇಟೆ: ‘ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನ 30 ಎಕರೆ ಪ್ರದೇಶದಲ್ಲಿ ವೇ–ಸ್ಪೇಸ್‌ ಸಂಸ್ಥೆ ಕೈಗೊಂಡಿರುವ ವೇಸೈಡ್‌ ಸೌಲಭ್ಯದಿಂದ ಈ ಭಾಗದ 500ಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗಲಿದೆ. ಅಲ್ಲದೇ, ಹೊಸಕೋಟೆ, ಮಾಲೂರು, ಕೋಲಾರ, ಬಂಗಾರಪೇಟೆ, ಕೆಜಿಎಫ್‌ ತಾಲ್ಲೂಕುಗಳಿಗೆ ಸಹಾಯವಾಗಲಿದೆ’ ಎಂದು ಹೊಸಕೋಟೆ ಶಾಸಕ ಹಾಗೂ ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ತಿಳಿಸಿದರು.

ತಾಲ್ಲೂಕಿನ ಐತಾಂಡಹಳ್ಳಿ ಗ್ರಾಮದ ಬಳಿ (ಬಂಗಾರಪೇಟೆ–ಕೆಜಿಎಫ್‌ ನಡುವೆ) ಕಾರಿಡಾರ್‌ನಲ್ಲಿ ವೈ–ಸ್ಪೇಸ್‌ ಸಂಸ್ಥೆ ನಿರ್ಮಿಸಲಿರುವ ಸಕಲ ಸೌಲಭ್ಯ ಕೇಂದ್ರದ (ವೇಸೈಡ್‌ ಫೆಸಿಲಿಟಿ) ಕಾಮಗಾರಿಗೆ ಸೋಮವಾರ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಟ್ಟು 1.5 ಲಕ್ಷ ಚದರ‌ ಅಡಿಯ ಜಾಗದಲ್ಲಿ ಸೌಲಭ್ಯಗಳು ನಿರ್ಮಾಣವಾಗಲಿವೆ. ಮುಂದಿನ ದಸರೆಗೆ ಉದ್ಘಾಟನೆ ಆಗಲಿದೆ. ಸಂಸ್ಥೆಯು ಅಭಿವೃದ್ಧಿ ಆಗುವುದರ ಜೊತೆಗೆ ಈ ಭಾಗದ ಅಕ್ಕಪಕ್ಕದ ಪ್ರದೇಶವನ್ನೂ ಅಭಿವೃದ್ಧಿ ಮಾಡಬೇಕು‌ ಎಂದರು.

ADVERTISEMENT

ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಹೆದ್ದಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಮಹಾನಗರಗಳನ್ನು ಸಂಪರ್ಕಿಸುವ ಹೆದ್ದಾರಿಗಳು ಆರ್ಥಿಕ ಚಟುವಟಿಕೆ, ವ್ಯಾಪಾರ ವಹಿವಾಟು ಹೆಚ್ಚಳಕ್ಕೆ ಕಾರಣವಾಗುತ್ತವೆ. ಜೊತೆಗೆ ಉದ್ಯೋಗವೂ ಸಿಗಲಿದೆ. ಈಗಾಗಲೇ ರಾಜ್ಯದೊಳಗಿನ 71 ಕಿ.ಮೀ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

ಹೊಸಕೋಟೆ ತಾಲ್ಲೂಕಿನ ಕೊಳತ್ತೂರಿನಲ್ಲಿ ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ ಆರಂಭವಾಗಿ ತಮಿಳುನಾಡು ರಾಜ್ಯದ ಶ್ರೀಪೆರಂಬದೂರಿನ ಬಳಿ ಅಂತ್ಯಗೊಳ್ಳಲಿದೆ. ಬೆಂಗಳೂರಿನಿಂದ ಚೆನ್ನೈಗೆ ಕೇವಲ ಮೂರು ಗಂಟೆಯಲ್ಲಿ ತಲುಪಬಹುದು. ವಿಮಾನದಲ್ಲಿ ಹೋಗುವುದಿಕ್ಕಿಂತ ಕಡಿಮೆ‌ ಸಮಯ ತೆಗೆದುಕೊಳ್ಳಲಿದೆ ಎಂದರು.

ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವೈ–ಸ್ಪೇಸ್ ಸಂಸ್ಥೆಯವರಿಗೆ ಇಲ್ಲಿ ಜಮೀನು ನೀಡಿ ಸೌಲಭ್ಯ ನಿರ್ಮಿಸಲು ಅವಕಾಶ ‌ಮಾಡಿಕೊಡಲಾಗಿದೆ. ಅಂತರರಾಷ್ಟ್ರೀಯ ‌ಗುಣಮಟ್ಟದ ವಿಶ್ರಾಂತಿ ಸೌಲಭ್ಯ ಇಲ್ಲಿ ಸಿಗಲಿದೆ ಎಂದು ತಿಳಿಸಿದರು.

ವೈ-ಸ್ಪೇಸ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಪಾಲುದಾರ ವೈ.ವಿ.ರತ್ನ ಕುಮಾರ್ ಮಾತನಾಡಿ, ‘ಬಂಗಾರಪೇಟೆ, ಚಿತ್ತೂರು, ಕಾಂಚೀಪುರನಲ್ಲಿ ತಲಾ 30 ಎಕರೆ ಸೇರಿ ಒಟ್ಟು 90 ಎಕರೆ ಪ್ರದೇಶ ನಮಗೆ ಟೆಂಡರ್‌ನಲ್ಲಿ ಲಭಿಸಿದೆ. ಮೊದಲು ಇಲ್ಲಿ ಅಭಿವೃದ್ಧಿ ಕೈಗೆತ್ತಿಕೊಂಡಿದ್ದೇವೆ. 145 ಅಡಿ ಅಭಯ ಆಂಜನೇಯ ಸ್ವಾಮಿ ದೇವರ ವಿಗ್ರಹ ಕೂಡ ಇಲ್ಲಿ ನಿರ್ಮಿಸಲಾಗುತ್ತಿದೆ’ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ (ತಂತ್ರಜ್ಞಾನ) ವಿ.ಪಿ.ಬ್ರಹ್ಮಾಂಕರ್ ಮಾತನಾಡಿ, ‘ದೂರದ ಪ್ರಯಾಣ ಕೈಗೊಳ್ಳುವವರಿಗೆ ಹೆದ್ದಾರಿ ನಡುವೆ ನಡುವೆ ವಿಶ್ರಾಂತಿ ಕೇಂದ್ರದ ಅಗತ್ಯವಿದೆ. ಇಂಥ ಸೌಲಭ್ಯದಿಂದ ಸ್ಥಳೀಯವಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾರಿಡಾರ್ ಒಟ್ಟು 288 ಕಿ.ಮೀ ಇದೆ. ರಾಜ್ಯ ಸರ್ಕಾರದ ಸಹಾಯದಿಂದ ಕರ್ನಾಟಕ ಭಾಗದ 71ಕಿ.ಮೀ ಕಾಮಗಾರಿ ಮುಗಿದಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಏನೇನು ಸೌಲಭ್ಯ ಇರಲಿದೆ ಎಂಬುದರ ಎವಿಯನ್ನು ಪ್ರಸ್ತುತಪಡಿಸಲಾಯಿತು. ಇದಕ್ಕೂ ಮುನ್ನ ಪೂಜಾ ಕಾರ್ಯಕ್ರಮಗಳು ನಡೆದವು. 

ಎನ್‌ಎಚ್‌ಎಲ್‌ಎಂಎಲ್‌ ಪ್ರಾದೇಶಿಕ ಅಧಿಕಾರಿ ಎಸ್.ಪಿ.ಸೋಮಶೇಖರ್, ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನಾ ನಿರ್ದೇಶಕಿ ಡಿ.ಅರ್ಚನಾ, ಸಂಸ್ಥೆಯ ವೀರ ಸುರಶೇಖರ್ ರೆಡ್ಡಿ, ವೇಮುಲಪಲ್ಲಿ ಶ್ರೀನಿವಾಸಲು, ದಿಲೀಪ್ ಕಾಳಹಸ್ತಿ, ಪ್ರಶಾಂತ್ ಪೋತುರಿ, ವಿಜಯ ಕುಮಾರ್, ಮಲ್ಲಿಕಾರ್ಜುನ, ಶಾಂಬಾಶಿವ ರಾವ್, ಗುರುದತ್, ರಾಮನಾಥ್, ಸೋಮಶೇಖರ್ ರೆಡ್ಡಿ, ದಯಾಕರ್,‌ ಪತ್ರಿಕೋದ್ಯಮಿ ರವಿ, ಶ್ರೀನಿವಾಸ್ ಇದ್ದರು.

ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನಲ್ಲಿ ವೈ ಸ್ಪೇಸ್‌ ಸಂಸ್ಥೆಯಿಂದ 144.9 ಅಡಿ ಎತ್ತರದ ಹನುಮಾನ್‌ ಪ್ರತಿಮೆ ನಿರ್ಮಾಣವಾಗಲಿದ್ದು ಅದರ ನೀಲನಕ್ಷೆ
ಪ್ರಯಾಣಿಕರ ವಿಶ್ರಾಂತಿಗಾಗಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇನಲ್ಲಿ ನಿರ್ಮಾಣವಾಗಲಿರುವ ಕೇಂದ್ರವಿರುವ ಸ್ಥಳ 

ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಮಾರ್ಗ ಮಧ್ಯೆ ವಿಶ್ರಾಂತಿಗೆ ಸೌಲಭ್ಯ ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಬಳಿ 30 ಎಕರೆ ಜಾಗ ಆರ್ಥಿಕ ಚಟುವಟಿಕೆ ವೃದ್ಧಿಗೆ ಅನುಕೂಲ

ಬೆಂಗಳೂರು–ಚೆನ್ನೈ ಕಾರಿಡಾರ್‌ ನಿರ್ಮಾಣದಿಂದ ಎರಡೂ ರಾಜ್ಯಗಳ ನಡುವಿನ ವಹಿವಾಟು ಆರ್ಥಿಕ ಚಟುವಟಿಕೆ ಹೆಚ್ಚಲಿದೆ. ₹ 8ಲಕ್ಷ ಕೋಟಿ ಆರ್ಥಿಕ ವಹಿವಾಟು ನಡೆಯಬಹುದೆಂದು ಅಂದಾಜಿಸಲಾಗಿದೆ
ಶರತ್‌ ಬಚ್ಚೇಗೌಡ ಹೊಸಕೋಟೆ ಶಾಸಕ
ನಾವು ಆಂಧ್ರ ಪ್ರದೇಶದಿಂದ ಬಂದು ಟೆಂಡರ್‌ ಪಡೆದು ಈ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಕನ್ನಡಿಗರು ನಮ್ಮನ್ನು‌ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇವೆ
ವೈ.ವಿ.ರತ್ನ ಕುಮಾರ್ ವೈ-ಸ್ಪೇಸ್‌ ಸಿಇಒ

145 ಅಡಿ ಎತ್ತರದ ಹನುಮಾನ್‌ ಪ್ರತಿಮೆ ದೇಶದಲ್ಲೇ ಅತಿ ಹೆಚ್ಚು ಎತ್ತರದ ಆಂಜನೇಯ ಸ್ವಾಮಿ ವಿಗ್ರಹ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನಲ್ಲಿ ತಲೆ ಎತ್ತಲಿದೆ. ವೈ ಸ್ಪೇಸ್‌ ಸಂಸ್ಥೆಯು ಈ ಕೆಲಸ ಕೈಗೆತ್ತಿಕೊಂಡಿದ್ದು ಈ ಸ್ಥಳದಲ್ಲಿ 144.9 ಅಡಿ ಎತ್ತರದ ಹನುಮಾನ್‌ ಪ್ರತಿಮೆ ನಿರ್ಮಾಣವಾಗಲಿದೆ. ಆಭಯ ಆಂಜನೇಯ ಸ್ವಾಮಿ ಹೆಸರಲ್ಲಿ ಈ ಪ್ರತಿಮೆಯು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಒಂದು ಹೆಗ್ಗುರುತಾಗಿರಲಿದೆ ಎಂದು ವೈ–ಸ್ಪೇಸ್‌ ಸಂಸ್ಥೆ ತಿಳಿಸಿದೆ.

ರಾಜ್ಯದಲ್ಲಿ 71 ಕಿ.ಮೀ; ಒಟ್ಟು 288 ಕಿ.ಮೀ ನಾಲ್ಕು ಪಥದ ಈ ಹೆದ್ದಾರಿಯು ಹೊಸಕೋಟೆಯಿಂದ ಮಾಲೂರು ಬಂಗಾರಪೇಟೆ ಬೇತಮಂಗಲ ಕೆಜಿಎಫ್‌ ನಗರವನ್ನು (71 ಕಿ.ಮೀ) ಸಂಪರ್ಕಿಸುತ್ತದೆ. ನಂತರ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದ ಕೆಲ ನಗರಗಳ ಮೂಲಕ ಹಾದು ಚೆನ್ನೈ (ಶ್ರೀಪೆರಂಬುದೂರು) ತಲುಪುತ್ತದೆ. ಒಟ್ಟು 288 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಬೆಂಗಳೂರು–ಚೆನ್ನೈ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದು ಕೂಡ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ. ಸುಮಾರು ₹ 18 ಸಾವಿರ ಕೋಟಿ ವೆಚ್ಚದ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಕಾರಿಡಾರ್‌ನ ರಾಜ್ಯದ ಪಾಲಿನ ಕಾಮಗಾರಿ ಈಗಾಗಲೇ ಮುಗಿದು ಏಳು ತಿಂಗಳಿನಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ತಮಿಳುನಾಡಿನ ಭಾಗದ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ಇನ್ನೂ ಉದ್ಘಾಟನೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.