ADVERTISEMENT

Union Budget reactions | ಕೋಲಾರ: ಭರವಸೆ, ನಿರಾಸೆಗಳ ನಡುವಿನ ಬಜೆಟ್‌

ಬೆಂಗಳೂರು–ಚೆನ್ನೈ ಹೈಸ್ಪೀಡ್‌ ರೈಲು ಘೋಷಣೆ, ಕೋಲಾರ ಜಿಲ್ಲೆಗೂ ಅನುಕೂಲ

ಕೆ.ಓಂಕಾರ ಮೂರ್ತಿ
Published 2 ಫೆಬ್ರುವರಿ 2026, 7:24 IST
Last Updated 2 ಫೆಬ್ರುವರಿ 2026, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಬೆಂಗಳೂರು–ಚೆನ್ನೈ ಹೈಸ್ಪೀಡ್‌ ರೈಲು ಕಾರಿಡಾರ್‌ ನಿರ್ಮಾಣ ಮಾಡುವುದಾಗಿ ಕೇಂದ್ರದ ಬಜೆಟ್‌ನಲ್ಲಿ ಭಾನುವಾರ ಘೋಷಣೆ ಆಗಿರುವುದು ಜಿಲ್ಲೆಯ ಪಾಲಿಗೆ ಆಶಾದಾಯಕ ಬೆಳವಣಿಗೆ ಆಗಿದೆ. ಆದರೆ, ಇನ್ನುಳಿದ ನಿರೀಕ್ಷಿತ ಯೋಜನೆಗಳು ಜಿಲ್ಲೆಗೆ ಲಭಿಸದಿರುವುದು ಸಹಜವಾಗಿಯೇ ನಿರಾಸೆ ತಂದೊಡ್ಡಿದೆ.

ಬೆಂಗಳೂರು–ಚೆನ್ನೈ ಹೈಸ್ಪೀಡ್‌ ರೈಲು ಜಿಲ್ಲೆಯ ಮೂಲಕವೇ ಹಾದು ಹೋಗಲಿದೆ. ಇದರಿಂದ ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ, ಸಂಪರ್ಕಕ್ಕೆ ಒತ್ತು ನೀಡಿದಂತಾಗುತ್ತದೆ.

ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಸತತ 9ನೇ ಬಜೆಟ್‌ನಲ್ಲಿ ಅಪರೂಪದ ಲೋಹಕ್ಕೂ ಒತ್ತು ನೀಡಲಾಗಿದೆ. ಈ ಘೋಷಣೆ ಜಿಲ್ಲೆಯ ಪಾಲಿಗೆ ಪುಷ್ಟಿ ನೀಡಿದಂತಾಗಿದೆ. ಏಕೆಂದರೆ ಕೆಜಿಎಫ್‌ನ ಚಿನ್ನದ ಗಣಿ ಸಂಬಂಧಿಸಿದಂತೆ ಅಪರೂಪದ ಲೋಹವಿರುವುದು ಪತ್ತೆಯಾಗಿದ್ದು, ಮುಂದೆ ಜಾಗತಿಕ ಟೆಂಡರ್‌ ಕೂಡ ಕರೆಯಲಾಗುತ್ತಿದೆ. ಈ ಸಂಬಂಧ ಸರ್ವೆ ನಡೆಸಲಾಗುತ್ತಿದೆ. ಒಂದು ಟನ್‌ ಮಣ್ಣು ತೆಗೆದರೆ 2 ಗ್ರಾಂ ಬಂಗಾರ ಸಿಗುವ ಸಾಧ್ಯತೆ ಇದೆ ಎಂಬುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.

ADVERTISEMENT

ಜಿಲ್ಲೆಗೊಂದು ಬಾಲಕಿಯರ ಹಾಸ್ಟೆಲ್‌ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಇದಲ್ಲದೇ, ಜವಳಿ ಉದ್ಯಮ, ರೇಷ್ಮೆಗೆ ಒತ್ತು ನೀಡಿರುವ ಕಾರಣ ಕೋಲಾರದಲ್ಲೇ ರೇಷ್ಮೆ ಉತ್ಪನ್ನ ಸಂಬಂಧಿಸಿದ ಪಾರ್ಕ್‌ ನಿರ್ಮಾಣಕ್ಕೆ ಜೀವಬಂದಂತಾಗಿದೆ. ಎರಡು ಕಡೆ ಜಾಗವನ್ನೂ ಗುರುತಿಲಾಗಿದೆ.

ಜಿಲ್ಲೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಯೋಜನೆಗಳು ಇಲ್ಲವಾದರೂ ಒಟ್ಟಾರೆ ಬಜೆಟ್‌ನ ಘೋಷಣೆಗಳಲ್ಲಿ ವಿವಿಧ ಯೋಜನೆಗಳಲ್ಲಿ ಜಿಲ್ಲೆಗೂ ಪಾಲ ಬರಬಹುದೆಂದು ಅಂದಾಜಿಸಲಾಗಿದೆ. ಈ ಎಲ್ಲಾ ಕ್ರಮಗಳು ಜಿಲ್ಲೆಯ ಪಾಲಿಗೆ ಭರವಸೆ ತಂದೊಡ್ಡಿವೆ. ಇನ್ನು ಈ ಭಾಗದ ಜನರ ಬಹು ನಿರೀಕ್ಷೆ ಆಗಿರುವ ಜಿಲ್ಲಾ ಕೇಂದ್ರ ಕೋಲಾರದಿಂದ ಬೆಂಗಳೂರಿನ ವೈಟ್‌ಫೀಲ್ಡ್‌ಗೆ ನೇರ ರೈಲು ಮಾರ್ಗ ಕನಸಾಗಿದೆಯೇ ಉಳಿದಿದೆ. ರೈಲು ಮಾರ್ಗ ನಿರ್ಮಾಣಕ್ಕೆ 10 ವರ್ಷಗಳ ಹಿಂದೆಯೇ ಸರ್ವೆ ಕೂಡ ನಡೆದಿದೆ.

‘ರೈಲು ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗ ಕೊಟ್ಟರೆ ಅನುದಾನ ಘೋಷಣೆ ಮಾಡಿಸಿಕೊಂಡು ಬರುವುದು ನನ್ನ ಜವಾಬ್ದಾರಿ’ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಮುಳಬಾಗಿಲು ಸೇರಿದಂತೆ ಕಡಪ–ಬೆಂಗಳೂರು ರೈಲು ಮಾರ್ಗದ ಬಗ್ಗೆಯೂ ಯಾವುದೇ ಹೊಸ ಹೆಜ್ಜೆ ಇಟ್ಟಿಲ್ಲ. ಶ್ರೀನಿವಾಸಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೈಲು ಕೋಚ್‌ ಕಾರ್ಖಾನೆಯದ್ದು ಕೂಡ ಅದೇ ಪರಿಸ್ಥಿತಿ. ಅದಕ್ಕೂ ಜಾಗ ಸಿಕ್ಕಿಲ್ಲ, ಹೀಗಾಗಿ, ಕೇಂದ್ರ ಸರ್ಕಾರ ಅನುದಾನ ಘೋಷಿಸುತ್ತಿಲ್ಲ ಎಂಬ ದೂರಿದೆ. ಈ ಬಾರಿ ಬಜೆಟ್‌ನಲ್ಲೂ ಅದರ ಪ್ರಸ್ತಾಪ ಇಲ್ಲ. ಕೆಜಿಎಫ್‌ನಲ್ಲಿ ರೈಲ್ವೆ ಸರ್ವಿಸ್‌ ಸೆಂಟರ್‌ ಆರಂಭಿಸಲು ಪ್ರಯತ್ನ ನಡೆಸುತ್ತಿರುವುದಾಗಿ ಈಚೆಗೆ ಮಲ್ಲೇಶ್‌ ಬಾಬು  ಹೇಳಿದ್ದರು.

ಅದಿನ್ನೂ ಬಜೆಟ್‌ ಪುಸ್ತಕ ಸೇರುವವರೆಗೆ ಹೋಗಿಲ್ಲ. ಮಾವಿನ ಸಂಸ್ಕರಣ ಘಟಕ ಸ್ಥಾಪಿಸುವ ಕೂಗು ಹಾಗೆಯೇ ಉಳಿದುಕೊಂಡಿದೆ. ಕೃಷ್ಣಾ ನದಿನ ಪಾಲಿನ ನೀರು ಹರಿಸುವುದು ಸೇರಿದಂತೆ ಕೋಲಾರಕ್ಕೆ ನೀರಾವರಿ ಯೋಜನೆಗಳ ಪ್ರಸ್ತಾಪ ಆಗದಿರುವುದು ಇಲ್ಲಿನ ಜನರಿಗೆ ನಿರಾಸೆ ತಂದೊಡ್ಡಿದೆ.

ರಾಜ್ಯ ಮಟ್ಟದ ಯೋಜನೆಗಳ ಅನುಷ್ಠಾನದಿಂದ ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಪರೋಕ್ಷ ಲಾಭ ದೊರೆಯುವ ನಿರೀಕ್ಷೆಯಿದೆ ಎನ್ನುತ್ತಾರೆ ಮಲ್ಲೇಶ್ ಬಾಬು.

ದೇಶದ ಅಭಿವೃದ್ಧಿಗೆ ಪೂರಕ ಬಜೆಟ್‌

ಬೆಂಗಳೂರು–ಚೆನ್ನೈ ಹೈಸ್ಪೀಡ್‌ ರೈಲು ಯೋಜನೆ ಘೋಷಿಸಲಾಗಿದೆ. ಇದರಿಂದ ಕೋಲಾರ ಜಿಲ್ಲೆಗೂ ಅನುಕೂಲವಾಗಲಿದೆ. 16ನೇ ಹಣಕಾಸು ಆಯೋಗ ಕರ್ನಾಟಕ ರಾಜ್ಯಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಎಂಎಸ್‌ಎಂಇ, ಜವಳಿ ಉದ್ಯಮ, ರೇಷ್ಮೆ, ತೆಂಗು, ಶ್ರೀಗಂಧ ಬೆಳೆಗೆ ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಕ್ಯಾನ್ಸರ್‌ ಔಷಧಿಗಳ ಸುಂಕ ವಿನಾಯಿತಿ ನೀಡಲಾಗಿದೆ. ಅಲ್ಲದೇ, ಮೋಟಾರ್‌ ಅಪಘಾತದ ಕ್ಲೈಮ್‌ಗಳ ಟಿಡಿಎಸ್‌ ತೆಗೆದು ಹಾಕಿರುವುದು ಬಹಳ ಅನುಕೂಲಕರವಾಗಲಿದೆ. ಅಪರೂಪದ ಲೋಹಕ್ಕೂ ಒತ್ತು ನೀಡಲಾಗಿದೆ. ದೇಶದ ಪ್ರಗತಿಗೆ ಅಗತ್ಯವಾಗಿ ಬೇಕಿರುವುದು ಮೂಲಸೌಕರ್ಯ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳೇ ಹೊರತು ಗ್ಯಾರಂಟಿ ಯೋಜನೆಗಳಲ್ಲ

ಎಂ.ಮಲ್ಲೇಶ್‌ ಬಾಬು, ಸಂಸದ, ಕೋಲಾರ

ಎಂಎಸ್‌ಎಂಇಗೆ ಅನುಕೂಲ

ದೀರ್ಘಾವಧಿ ಬೆಳವಣಿಗೆ ಗಮನದಲ್ಲಿಟ್ಟುಕೊಂಡು, ವ್ಯವಹಾರ ಸರಳತೆಗೆ ಒತ್ತು ನೀಡಿರುವ ಬಜೆಟ್ ಇದಾಗಿದೆ. ಎಂಸ್‌ಎಂಇಗಳ ಅಭಿವೃದ್ಧಿಗೆ ₹ 10,000 ಕೋಟಿ ಅನುದಾನ ನೀಡಿರುವುದು ತಯಾರಿಕಾ ಕ್ಷೇತ್ರದ ಸ್ಪರ್ಧಾತ್ಮಕ, ತಂತ್ರಜ್ಞಾನ ಸುಧಾರಣೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿದೆ. ಬೆಂಗಳೂರಿಗೆ ಸಂಬಂಧಪಟ್ಟಂತೆ ಘೋಷಿಸಿರುವ ಹೈಸ್ಪೀಡ್ ರೈಲು ಮಾರ್ಗಗಳು ಲಾಜಿಸ್ಟಿಕ್ಸ್ ಹಾಗೂ ಸರಬರಾಜು ಸರಣಿ ಬಲಪಡಿಸಲಿವೆ. ತೆರಿಗೆ ಅನುಸರಣೆ ಸರಳೀಕರಣ ಎಂಎಸ್‌ಎಂಇಗಳಿಗೆ ಮತ್ತಷ್ಟು ಸಹಕಾರಿ. ಎಂಎಸ್‌ಎಂಇಗಳ ದೀರ್ಘಕಾಲೀನ ಹಾಗೂ ಸ್ಥಿರ ಬೆಳವಣಿಗೆಗೆ ಅನುಕೂಲಕರ

ಶ್ರೀಪ್ರಕಾಶ, ಅಧ್ಯಕ್ಷ, ಮಾಲೂರು ಕೆಐಎಡಿಬಿ ಪ್ರದೇಶ ಕೈಗಾರಿಕಾ ಸಂಘ

ಕೃಷ್ಣಾ ನದಿ ನೀರಿನ ವಾಗ್ದಾನ ಮರೆತಂತಿದೆ

ಬರಪೀಡಿತ ಜಿಲ್ಲೆಗಳಿಗೆ ಸುರಕ್ಷಿತವಾದ ಶಾಶ್ವತ ಶುದ್ಧ ಕುಡಿಯುವ ಕೃಷ್ಣಾ ನದಿಯ ನೀರನ್ನು ಹರಿಸುವ ವಾಗ್ದಾನವನ್ನು ಬಜೆಟ್ ಘೋಷಣೆಯ ವೇಳೆ ಮರೆತಂತಿದೆ. ಪೆನ್ನಾರ್ ಮತ್ತು ಅದರ ಉಪನದಿಗಳ ಪ್ರದೇಶದಲ್ಲಿರುವ ಕೆರೆಗಳಿಗೆ ರಾಜ್ಯ ಸರ್ಕಾರವು ಹರಿಸುತ್ತಿರುವ ಬೆಂಗಳೂರಿನ ತ್ಯಾಜ್ಯ ನೀರನ್ನು ಹಿಂದಿನ ಕೇಂದ್ರ ಸರ್ಕಾರವೇ ರೂಪಿಸಿರುವ ಮಾನದಂಡಗಳಿಗನುಸಾರವಾಗಿ ಮೂರನೇ ಹಂತದ ಶುದ್ಧೀಕರಣಕ್ಕೆ ಅಗತ್ಯವಾದ ಅನುದಾನವನ್ನು ನೀಡುವ ನಿರೀಕ್ಷೆಯೂ ಹುಸಿಯಾಯಿತು. ಮುಂದೆ ಜಲಾಗ್ರಹ ಜನಾಂದೋಲನದಿಂದಲೇ ನೀರಿನ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ

ಆರ್‌.ಆಂಜನೇಯ ರೆಡ್ಡಿ, ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ

ಚಿನ್ನದ ದರ ಏರಿಕೆ ನಿಯಂತ್ರಿಸಬೇಕಿತ್ತು

ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಯೋಜನೆಗಳು ಶ್ರೀಮಂತರು, ಬಂಡವಾಳಶಾಹಿ ಹಾಗೂ ಕಾರ್ಪೊರೇಟ್‌ ವಲಯದ ಪರವಾಗಿರುವಂತಿವೆ. ಬಡವರನ್ನು ಮೇಲೆತ್ತುವ ಅಂಶಗಳು ಕಾಣುತ್ತಿಲ್ಲ. ಚಿನ್ನದ ದರ ಏರಿಕೆ ನಿಯಂತ್ರಣ ಮಾಡಲು ಕ್ರಮ ವಹಿಸಬೇಕಿತ್ತು. ಬಡವರು, ಮಧ್ಯಮ ವರ್ಗದ ಜನರು ಚಿನ್ನ ಖರೀದಿಸದ ಪರಿಸ್ಥಿತಿ ಸೃಷ್ಟಿಯಾಗಿದೆ. ಮದುವೆ ಸಂದರ್ಭದಲ್ಲಿ ಈ ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತಿದೆ. ಕ್ಯಾನ್ಸರ್‌ ಔಷಧಿಗಳ ಮೇಲಿನ ಸುಂಕ ವಿನಾಯಿತಿ ಸ್ವಾಗತಾರ್ಹ. ಇಂಥ ಕ್ರಮ ಅಗತ್ಯವಾಗಿತ್ತು ಕೂಡ. ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಸಾಕಾಗುತ್ತಿಲ್ಲ

ರಾಧಾಮಣಿ, ಗೃಹಿಣಿ, ಕೋಲಾರ

ರೈಲು ಮಾರ್ಗ, ನೀರಾವರಿ ಪ್ರಸ್ತಾಪ ಇಲ್ಲ

ಜಿಲ್ಲಾ ಕೇಂದ್ರವಾದ ಕೋಲಾರ ನಗರದಿಂದ ರಾಜಧಾನಿ ಬೆಂಗಳೂರಿಗೆ ನೇರ ರೈಲು ಮಾರ್ಗವೇ ಇಲ್ಲ. ಈ ಸಂಬಂಧ ದಶಕದಿಂದ ಹಲವರು ದನಿ ಎತ್ತುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲೂ ಪ್ರಸ್ತಾಪವಾದಂತೆ ಕಾಣುತ್ತಿಲ್ಲ. ಅದೇ ರೀತಿ ಕೋಲಾರಕ್ಕೆ ಶಾಶ್ವತ ನೀರಾವರಿ ಯೋಜನೆ ತರಬೇಕೆಂದು ಆಗ್ರಹಿಸುತ್ತಾ ಹತ್ತಾರು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಕೃಷ್ಣಾ ನದಿ ನೀರು ಗಡಿ ಭಾಗಕ್ಕೆ ಬಂದಿದ್ದು, ಕೋಲಾರಕ್ಕೂ ಹರಿಸಬೇಕಿದೆ. ಈ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ. ಮುಂದಾದರೂ ಈ ಎರಡು ಯೋಜನೆಗಳಿಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು

ಕೆ.ಪಿ.ವೆಂಕಟಚಲಾಪತಿ, ಜಿಲ್ಲಾ ಅಧ್ಯಕ್ಷ, ಆಮ್‌ ಆದ್ಮಿ ಪಕ್ಷ, ಕೋಲಾರ

ವಿಕಸಿತ ಭಾರತಕ್ಕೆ ಪೂರಕ ಬಜೆಟ್‌

ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಆರ್ಥಿಕ ಸಚಿವೆ ನಿರ್ಮಲಾ ಸಿತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್‌‌ ಪ್ರಗತಿಯ ಹಾದಿಯ ಬಜೆಟ್ ಆಗಿದೆ. ವಿಕಸಿತ ಭಾರತದ ಜೊತೆಗೆ ಆತ್ಮನಿರ್ಭರ ಭಾರತಕ್ಕೆ ಹೊಸ ಶಕ್ತಿ ತುಂಬಲಿದೆ.

ಆರ್ಥಿಕ ಪ್ರಗತಿ ಜತೆಗೆ ಸಾಮಾಜಿಕ ಅಭಿವೃದ್ಧಿ ಒಳಗೊಂಡಿದೆ. ಪ್ರಮುಖವಾಗಿ ಆರೋಗ್ಯ, ಶಿಕ್ಷಣ, ಕೃಷಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಹಣಕಾಸಿ ಹೂಡಿಕೆ ಮಾಡುವ ದೃಷ್ಟಿಕೋನ ಕಾಣಿಸುತ್ತದೆ

ಓಂಶಕ್ತಿ ಚಲಪತಿ, ಬಿಜೆಪಿ ಜಿಲ್ಲಾ ಅಧ್ಯಕ್ಷ, ಕೋಲಾರ

ಅಭಿವೃದ್ಧಿ ದೂರದೃಷ್ಟಿ ಇಲ್ಲದ ಬಜೆಟ್

ರಾಜ್ಯಕ್ಕೆ ವಿಶೇಷ ಹಾಗೂ ಪೂರಕ ಯೋಜನೆಗಳಿಲ್ಲ. ತೆರಿಗೆ ಅನುದಾನ ಹಂಚಿಕೆಯಲ್ಲಿ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ. ತಮಿಳುನಾಡು, ಕೇರಳದಲ್ಲಿ ಮುಂಬರುವ ಚುನಾವಣೆ ದೃಷ್ಟಿಯಿಂದ ಅನುದಾನ ಘೋಷಣೆ ಮಾಡಲಾಗಿದೆ. ಚೆನ್ನೈ- ಬೆಂಗಳೂರು ಹೈಸ್ಪೀಡ್ ರೈಲು ಕೇವಲ ಘೋಷಣೆ ಅಷ್ಟೇ ಆಗಬಾರದು. ಎಲ್ಲಕ್ಕೂ ತೆರಿಗೆ ಹಾಕಿರುವ ಕಾರಣ ಬೆಲೆ ಏರಿಕೆಯಿಂದ ಬಡವರ ಹಾಗೂ ಮಧ್ಯಮ ವರ್ಗದ ಜನರ ಬದುಕಿಗೆ ಸಂಕಷ್ಟ ತರುತ್ತದೆ. ‌ಕೃಷಿ, ನೀರಾವರಿ, ಮೂಲಸೌಕರ್ಯ, ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲೂ ಅನುದಾನ ನಿರಾಸೆಯಾಗಿದೆ

ಎ.ಅಶ್ವತ್ಥರೆಡ್ಡಿ, ಕಾಂಗ್ರೆಸ್‌ ಮುಖಂಡ, ಮಾಲೂರು

ರೈತರ ಕಡೆಗಣನೆ, ಬಂಡವಾಳಶಾಹಿ ಪರ

ಮಾವು ಸಂಸ್ಕರಣ ಘಟಕ, ರೈಲ್ವೆ, ಕೈಗಾರಿಕೆ ಹಾಗೂ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಕೇಂದ್ರ ಬಜೆಟ್‌ನಲ್ಲಿ ಈ ಬಾರಿಯೂ ಹುಸಿಯಾಗಿದೆ. ರೈತರನ್ನು ಕಡೆಗಣಿಸಿ ಬಂಡವಾಳಶಾಹಿಗಳ ಪರ ಬಜೆಟ್ ಮಂಡನೆ ಮಾಡಲಾಗಿದೆ. ಶ್ರೀನಿವಾಸಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರೈಲ್ವೆ ಕೋಚ್ ಕಾರ್ಖಾನೆಗೆ ದಶಕ ಕಳೆದರೂ ಅನುದಾನ ಸಿಕ್ಕಿಲ್ಲ. ಕಡಪ, ಬೆಂಗಳೂರು ರೈಲು ಮಾರ್ಗದ ಘೋಷಣೆಯ ನಿರೀಕ್ಷೆಯೂ ಇತ್ತು. ಬಹುಮುಖ್ಯವಾದ ಶಾಶ್ವತ ಕುಡಿಯುವ ನೀರಿನ ಯೋಜನೆಗೂ ಆದ್ಯತೆ ಸಿಕ್ಕಿಲ್ಲ

ಕೆ.ನಾರಾಯಣಗೌಡ, ರೈತ ಮುಖಂಡ, ಕೋಲಾರ

ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ

ಪಕ್ಕದ ರಾಜ್ಯಗಳಿಗೆ ಆದ್ಯತೆ ನೀಡಿ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ರೀತಿ ಕೇಂದ್ರ ಬಜೆಟ್ ಮಂಡನೆಯಾಗಿದೆ. ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದ್ದು, ರೈತ ವಿರೋಧಿ ಕೇಂದ್ರ ಬಜೆಟ್ ಇದಾಗಿದೆ. ಕೋಲಾರ ಜಿಲ್ಲೆಯ ಜನರ ಬಹು ನಿರೀಕ್ಷಿತ ಕೋಲಾರ –ಬೆಂಗಳೂರು ನೇರ ರೈಲು ಮಾರ್ಗದ ಕನಸು ಕನಸಾಗೆಯೇ ಉಳಿದಿದೆ. ಶ್ರೀನಿವಾಸಪುರದಲ್ಲಿ ರೈಲ್ವೆ ಕಾರ್ಖಾನೆಗೂ ಅನುಮೋದನೆ ಸಿಕ್ಕಿಲ್ಲ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಲ್ಲಿಯೂ ವಿಫಲವಾಗಿದೆ. ಇದೊಂದು ನಿರಾಶದಾಯಕ ಬಜೆಟ್.

ಕಲ್ವಮಂಜಲಿ ರಾಮುಶಿವಣ್ಣ, ರೈತ ಮುಖಂಡ, ಕೋಲಾರ

ಸರ್ವಯಾಪಿ ಸರ್ವಸ್ಪರ್ಶಿ ಬಜೆಟ್‌

ಸರ್ವಯಾಪಿ ಸರ್ವಸ್ಪರ್ಶಿ ಬಜೆಟ್‌ ಇದಾಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿರುವುದು ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ್‌ಗೆ ಪೂರಕವಾಗಿದೆ.

ಮೇಕ್ ಇನ್ ಇಂಡಿಯಾದಿಂದ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಆಗಲಿದೆ. ದೇಶದ ಪ್ರಗತಿ ಶೇ7ರಷ್ಟು ಏರಿಕೆಯಾಗಿರುವುದು ವಿಶ್ವದಲ್ಲೇ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ‌ವಿದೇಶ ಆಮದು ನೀತಿ ಕಡಿಮೆ ಮಾಡಿ ಸ್ವದೇಶಿ ಉತ್ಪನ್ನಗಳನ್ನು ಸಿದ್ದಪಡಿಸಲು ಬಜೆಟ್ ಪುಷ್ಟಿ ನೀಡಿದೆ

ಕೆಂಬೋಡಿ ನಾರಾಯಣಸ್ವಾಮಿ, ಬಿಜೆಪಿ ಮಾಧ್ಯಮ ಸಹ ಪ್ರಮುಖ್‌, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.