ADVERTISEMENT

ಕೋಲಾರ ಜಿಲ್ಲೆಗೆ ಉತ್ತಮ ಶಿಕ್ಷಕ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 13:45 IST
Last Updated 4 ಸೆಪ್ಟೆಂಬರ್ 2019, 13:45 IST
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಕೋಲಾರ ತಾಲ್ಲೂಕಿನ ಚಿಲುಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ರಮೇಶ್ ಸಹೋದ್ಯೋಗಿಗಳು ಹಾಗೂ ಮಕ್ಕಳೊಂದಿಗೆ ಸಂತಸ ಹಂಚಿಕೊಂಡರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಕೋಲಾರ ತಾಲ್ಲೂಕಿನ ಚಿಲುಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ರಮೇಶ್ ಸಹೋದ್ಯೋಗಿಗಳು ಹಾಗೂ ಮಕ್ಕಳೊಂದಿಗೆ ಸಂತಸ ಹಂಚಿಕೊಂಡರು.   

ಕೋಲಾರ: ತಾಲ್ಲೂಕಿನ ಚಿಲುಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ರಮೇಶ್ ಅವರು 2019–20ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕುಟುಂಬ ಸದಸ್ಯರು ಹಾಗೂ ಸಹೋದ್ಯೋಗಿಗಳಲ್ಲಿ ಸಂತಸ ಮನೆ ಮಾಡಿದೆ.

ತಾಲ್ಲೂಕಿನ ಕೆಂಬೋಡಿ ಗ್ರಾಮದ ಅಯ್ಯಣ್ಣ ಮತ್ತು ವೆಂಕಟಮ್ಮ ದಂಪತಿಯ ಮಗನಾದ ರಮೇಶ್ ಅವರು 1992ರಿಂದಲೂ ಚಿಲುಪನಹಳ್ಳಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ರಮಾ ಅವರು ಮುಳಬಾಗಿಲು ತಾಲ್ಲೂಕಿನಲ್ಲಿ ಶಿಕ್ಷಕಿಯಾಗಿದ್ದಾರೆ.

ಪರಿಸರ ಪ್ರೇಮಿಯಾದ ರಮೇಶ್ ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರಿಗೆ ಈಗಾಗಲೇ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ. ಜತೆಗೆ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಗೌರವವೂ ಸಂದಿದೆ.

ADVERTISEMENT

ರಮೇಶ್‌ ಅವರು ಚಿಲಪನಹಳ್ಳಿ ಶಾಲೆ ಆವರಣವನ್ನು ಸಂಪೂರ್ಣ ಹಸಿರಾಗಿಸಿದ್ದು, ಹೂವು ಮತ್ತು ತರಕಾರಿ ಜತೆಗೆ ಔಷಧದ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲದೇ, ಕುಂಡಗಳಲ್ಲಿ ಗಿಡ ಬೆಳೆಸಿ ಶಾಲೆಯನ್ನು ಹಸಿರುಮಯಗೊಳಿಸಿದ್ದಾರೆ. ಈ ಶಾಲೆಯು ಸತತ 6 ಬಾರಿ ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ ಭಾಜನವಾಗಿದೆ.ಶಾಲಾ ಮಕ್ಕಳು ಇವರ ಮುಂದಾಳತ್ವದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಈ ಪ್ರಶಸ್ತಿ ಬಂದಿರುವುದಕ್ಕೆ ಸಂತೋಷವಾಗಿದೆ. ಪ್ರಶಸ್ತಿಯು ನನ್ನ ಜವಾಬ್ದಾರಿ ಹೆಚ್ಚಿಸಿದ್ದು, ಮುಂದೆ ಮತ್ತಷ್ಟು ಪ್ರೀತಿಯಿಂದ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ರಮೇಶ್‌ ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.