ಕೆಜಿಎಫ್: ನಗರ ಮತ್ತು ಬೇತಮಂಗಲಕ್ಕೆ ಕುಡಿಯಲು ಸಿಹಿ ನೀರನ್ನು ನೀಡುವ ಬೇತಮಂಗಲ ಜಲಾಶಯ ಭರ್ತಿಯಾಗಿರುವುದು ಒಂದು ಸಂಭ್ರಮವಾದರೆ, ಜಲಾಶಯದ ಕೋಡಿ ಮತ್ತು ಗೇಟ್‌ನಲ್ಲಿ ಬಿರುಕು ಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಜಲಾಶಯದಲ್ಲಿ 34 ಗೇಟ್‌ಗಳಿವೆ. ಒಂದು ಅಡಿ ನೀರು ಕೋಡಿ ಹೋದರೆ ಒಂದು ಗೇಟ್ ತೆಗೆಯಲಾಗುವುದು. ಇನ್ನೂ ಹೆಚ್ಚು ಬಂದರೆ ಎರಡು ಗೇಟ್ ತೆಗೆಯಬಹುದು. ಅತಿ ಹೆಚ್ಚು ನೀರು ಬಂದರೆ ನಾಲ್ಕು ಗೇಟ್ ತೆಗೆದರೆ ಸಾಕು ನಿರ್ವಹಣೆ ಮಾಡಬಹುದು ಎಂದು ಜಲಮಂಡಳಿ ಸಿಬ್ಬಂದಿ ಹೇಳುತ್ತಾರೆ.
ಜಲಾಶಯದಲ್ಲಿರುವ ಎಂಟು ಗೇಟ್‌ಗಳು ದುರಸ್ತಿಗೆ ಒಳಗಾಗಿವೆ. ಅವುಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಮಧ್ಯ ಭಾಗದಲ್ಲಿ ಒಂದು ಗೇಟ್ ಬಳಿ ಗೋಡೆಯಲ್ಲಿ ಗಿಡ ಬೆಳೆದಿರುವುದರಿಂದ ಬಿರುಕು ಬಿಟ್ಟಿದೆ. ಕೋಡಿಯಲ್ಲಿ ಕೂಡ ಬಿರುಕು ಬಿಟ್ಟಿದ್ದು, ಅಲ್ಲಿ ಕೂಡ ನೀರು ಸೋರಿಕೆಯಾಗುತ್ತಿದೆ. ಉಸ್ತುವಾರಿ ನೋಡಿಕೊಳ್ಳಲು ಹಿರಿಯ ಅಧಿಕಾರಿಗಳು ಇಲ್ಲ. ಜೊತೆಗೆ ಮಂಡಳಿಯ ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡುತ್ತಿಲ್ಲ. ಮಂಡಳಿಯ ಕರ್ತವ್ಯಲೋಪದಿಂದಾಗಿ ಗೇಟ್ ಕುಸಿಯುವ ಭೀತಿ ಉಂಟಾಗಿದೆ ಎಂಬುದು ಸಿಬ್ಬಂದಿ ಆತಂಕವಾಗಿದೆ.
ಈಚೆಗೆ ಬೇತಮಂಗಲ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಮತ್ತು ಸಿಬ್ಬಂದಿ ಲೋಕಾಯುಕ್ತದ ಬಲೆಗೆ ಬಿದ್ದ ಮೇಲೆ ಉಪ ವಿಭಾಗಕ್ಕೆ ಯಾವುದೇ ಅಧಿಕಾರಿಯ ನೇಮಕವಾಗಿಲ್ಲ. ಬೆಂಗಳೂರಿನ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಅವರು ಬರುವುದೇ ಅಪರೂಪ. ಶನಿವಾರ ಜಲಾಶಯ ತುಂಬುವ ಸಂದರ್ಭದಲ್ಲಿ ಕೋಡಿ ಹೋಗಬಹುದು ಎಂಬ ಮುನ್ಸೂಚನೆಯನ್ನು ನೆರೆಯ ತಮಿಳುನಾಡಿನ ತಾಲ್ಲೂಕುಗಳಿಗೆ ನೀಡಬೇಕಾಗಿತ್ತು. ಈ ವರದಿಯನ್ನು ನೀಡುವಲ್ಲಿ ಕೂಡ ವ್ಯತ್ಯಾಸವಾಯಿತು. ಕೋಡಿ ಹೋದ ಸಂದರ್ಭದಲ್ಲಿ ಶಾಸಕಿ ರೂಪಕಲಾ ಬಾಗಿನ ಅರ್ಪಿಸಿದ ಸಂದರ್ಭದಲ್ಲೂ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಜಲಾಶಯ ನೋಡಲು ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡಲು ಕೂಡ ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ.
ಜಲಾಶಯದ ಉಸ್ತುವಾರಿಯನ್ನು ಜಲಮಂಡಳಿ ಸರಿಯಾಗಿ ನಿರ್ವಹಿಸುತ್ತಿಲ್ಲ. ಅವರ ಕೆಲಸವನ್ನು ಗ್ರಾಮ ಪಂಚಾಯಿತಿ ಮಾಡುತ್ತಿದೆ.ವಿನೂ ಕಾರ್ತಿಕ್ ಬೇತಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ.
ನೀರಿದ್ದರೂ ಸರಬರಾಜು ಇಲ್ಲ
ಜಲಾಶಯ ಭರ್ತಿಯಾಗಿದ್ದರೂ ಬೇತಮಂಗಲ ಮತ್ತು ಕೆಜಿಎಫ್ ನಗರಕ್ಕೆ ಬೇಕಾದಷ್ಟು ಪ್ರಮಾಣದ ಕುಡಿಯುವ ನೀರು ಒದಗಿಸಲು ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಜಲಾಶಯದ ಸಾಮರ್ಥ್ಯ 350 ಮಿಲಿಯನ್ ಕ್ಯೂಬಿಕ್ ಫೀಟ್ ಆಗಿದೆ. ಪ್ರತಿನಿತ್ಯ ಕೆಜಿಎಫ್ ನಗರಕ್ಕೆ 15 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದೆ. ಆದರೆ 5 ಲಕ್ಷ ಲೀಟರ್ ಕೂಡ ನೀರು ಸರಬರಾಜು ಆಗುತ್ತಿಲ್ಲ. ಪಾರಾಂಡಹಳ್ಳಿಯ ಪಂಪ್ ಹೌಸ್‌ನಲ್ಲಿ ಒಂದು ತೊಟ್ಟಿ ದುರಸ್ತಿಯಾಗಿರುವುದರಿಂದ ಅದರಲ್ಲಿ ನೀರು ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಗರದ ಕೆಲವೇ ವಾರ್ಡ್‌ಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಅಮೃತ ಯೋಜನೆಯಡಿ ನಗರದಿಂದ ಬೇತಮಂಗಲದವರೆವಿಗೂ ಹೊಸ ಪೈಪ್ ಲೈನ್ ಹಾಕಲಾಯಿತು. ಅದರ ಸಂಪೂರ್ಣ ಉಪಯೋಗ ಆಗಿಲ್ಲ. ಬೇತಮಂಗಲ ಮತ್ತು ಕೆಜಿಎಫ್ ಸೇರಿ ತಿಂಗಳಿಗೆ ₹4 ರಿಂದ ₹5 ಲಕ್ಷ ಆದಾಯ ಬರುತ್ತಿದೆ. ಇಷ್ಟು ಕಡಿಮೆ ಆದಾಯದಲ್ಲಿ ಮಂಡಳಿಯ ಖರ್ಚು ಸರಿದೂಗಿಸುವುದು ಕಷ್ಟ. ಹೊರಗುತ್ತಿಗೆ ನೌಕರರಿಗೆ ಸಂಬಳ ಕೊಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.