
ಬೇತಮಂಗಲ: ರಸಗೊಬ್ಬರಕ್ಕಾಗಿ ಗಂಟೆಗಟ್ಟಲೇ ಸಾಲಿನಲ್ಲಿ ನಿಂತ ರೈತರಿಂದ ಅಂಗಡಿ ಮಾಲೀಕರು ರಸಗೊಬ್ಬರಕ್ಕೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೆಜಿಎಫ್ ತಾಲ್ಲೂಕಿನ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್‌ಪೇಟ್ ರಸ್ತೆಯಲ್ಲಿರುವ ಮಾರುತಿ ಎಂಟರ್ ಪ್ರೈಸಸ್ ಅಂಗಡಿ ಮಾಲೀಕನ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ರಸಗೊಬ್ಬರಕ್ಕೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯ ರೈತರನ್ನು ಕಡೆಗಣಿಸಿ ಹೊರರಾಜ್ಯದವರಿಗೆ ಗೊಬ್ಬರ ಸರಬರಾಜು ಮಾಡಲಾಗುತ್ತಿದೆ ಎಂದು ರೈತರು ದೂರಿದರು.
ಒಂದು ಮೂಟೆ ಯೂರಿಯಾಕ್ಕೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಸುಮಾರು ₹300–₹400 ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ. ಬೆವರು ಸುರಿಸಿ ದುಡಿಯುವ ಕರ್ನಾಟಕದ ರೈತರು ಗೊಬ್ಬರಕ್ಕಾಗಿ ಅಂಗಡಿ ಮುಂದೆ ಕಾಯುವ ದುಸ್ಥಿತಿ ಎದುರಾಗಿದೆ. ಇಷ್ಟಾಗಿಯೂ, ಅಂಗಡಿ ಮಾಲೀಕರು ಮಾತ್ರ ಸ್ಥಳೀಯರಿಗೆ ಆದ್ಯತೆ ಮೇರೆಗೆ ರಸಗೊಬ್ಬರ ನೀಡುವ ಬದಲಿಗೆ ಆಂಧ್ರಪ್ರದೇಶದ ಪ್ರಭಾವಿಗಳಿಗೆ ಗುಟ್ಟಾಗಿ ರಸಗೊಬ್ಬರ ಮಾರುತ್ತಿದ್ದಾರೆ ಎಂದು ಅನ್ನದಾತರು ಆರೋಪಿಸಿದರು.
ಸ್ಥಳಕ್ಕೆ ದೌಡಾಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರತಿಭಾ ಹಾಗೂ ನಾರಾಯಣರೆಡ್ಡಿ ರೈತರ ಅಹವಾಲು ಆಲಿಸಿದರು. ಜೊತೆಗೆ, ಅಂಗಡಿಯನ್ನು ಪರಿಶೀಲಿಸಿ, ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರೈತರಾದ ಜಯರಾಮ್ ರೆಡ್ಡಿ, ಮಲ್ಲೇಶ್, ಕೃಷ್ಣಾ ರೆಡ್ಡಿ , ವೆಂಕಟಪ್ಪ, ಅರುಣ್, ಹರೀಶ್, ಸೋಮಶೇಖರ್ ರೆಡ್ಡಿ, ವೆಂಕಟಾಚಲಪತಿ, ಮಂಜುನಾಥ್, ಸುರೇಶ್ ಸೇರಿದಂತೆ ಅನೇಕ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.