ADVERTISEMENT

ಕುಡಿಯುವ ನೀರಿಗೆ ಮುಂಜಾಗ್ರತೆವಹಿಸಿ- ಕೆ.ವೈ.ನಂಜೇಗೌಡ

ಮಾಲೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ವೈ. ನಂಜೇಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:43 IST
Last Updated 1 ಏಪ್ರಿಲ್ 2021, 7:43 IST
ಮಾಲೂರು ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಎನ್.ವಿ. ಮುರಳೀಧರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು
ಮಾಲೂರು ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಎನ್.ವಿ. ಮುರಳೀಧರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಮಾಲೂರು: ‘ಬೇಸಿಗೆ ಆರಂಭವಾಗಿದ್ದು, ಪಟ್ಟಣದಲ್ಲಿ ನೀರಿಗೆ ಹಾಹಾಕಾರ ತಲೆದೋರದಂತೆ ಪುರಸಭೆ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು’ ಎಂದು ಶಾಸಕ ಕೆ.ವೈ.ನಂಜೇಗೌಡ ಸೂಚಿಸಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಅಧ್ಯಕ್ಷ ಎನ್.ವಿ. ಮುರಳೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಕೋವಿಡ್‌ 2ನೇ ಅಲೆ ತಡೆಯಲು ಪಟ್ಟಣದ ಮುಖ್ಯ ಸರ್ಕಲ್‌ಗಳಲ್ಲಿ ಸ್ವಚ್ಛತೆಕೈಗೊಳ್ಳಬೇಕು. ಕೊರೊನಾ ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ಗೋಡೆಬರಹ ಬರೆಸಬೇಕು. ಸಾರ್ವಜನಿಕರು ಸೋಂಕು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಿದರು.

ADVERTISEMENT

ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ₹ 17 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. 27 ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪಟ್ಟಣದ ಸೌಂದರ್ಯ ಹೆಚ್ಚಿಸಲು ₹ 6 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆ ಅಭಿವೃದ್ಧಿಪಡಿಸಿ ರಸ್ತೆಬದಿ ಚರಂಡಿ ಕಾಮಗಾರಿ ಸಹ ಆರಂಭಿಸಲಾಗಿದೆ. ರೈಲ್ವೆ ಮೇಲು ಸೇತುವೆ ಬಳಿ ಅಂಡರ್‌ಪಾಸ್ ಕಾಮಗಾರಿ ಮಾಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದರು.

‘ಪಟ್ಟಣದಲ್ಲಿ ಸುಮಾರು 50 ಸಾವಿರ ಜನಸಂಖ್ಯೆಯಿದೆ. ಸಮರ್ಪಕವಾದ ಗ್ರಂಥಾಲಯ ಇಲ್ಲದೆ ಸಾರ್ವಜನಿಕರು ತೊಂದರೆಪಡುವಂತಾಗಿದೆ. ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಸುಮಾರು ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಗ್ರಂಥಾಲಯ ಮೇಲ್ವಿಚಾರಕರು ಸುಮಾರು ಎರಡ್ಮೂರು ವರ್ಷಗಳಿಂದ ಪುರಸಭೆ ಕಚೇರಿಗೆ ಸುತ್ತುತ್ತಿದ್ದಾರೆ. ಆದರೆ, ಅಧಿಕಾರಿಗಳು ಇಲ್ಲಿಯವರೆಗೂ ಗ್ರಂಥಾಲಯಕ್ಕೆ ನಿವೇಶನ ಮಂಜೂರು ಮಾಡಿಕೊಡಲು ವಿಫಲವಾಗಿದ್ದಾರೆ’ ಎಂದು ಸದಸ್ಯ ಭಾನುತೇಜದೂರಿದರು.

ಸದಸ್ಯ ರಾಮಮೂರ್ತಿ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆ ವಿಫಲವಾಗಿದೆ. ಯಾವುದೇ ವಾರ್ಡ್‌ನಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಸದಸ್ಯೆಯರ ನಿರ್ಲಕ್ಷ್ಯ: ಸಭೆ ಮುಗಿಯಲು ಕೇವಲ ಅರ್ಧಗಂಟೆ ಇರುವಾಗ ಸದಸ್ಯೆಯರಿಗೆ ಮಾತನಾಡಲು ಶಾಸಕರ ಒತ್ತಾಯದ ಮೇರೆಗೆ ಅವಕಾಶ ನೀಡಲಾಯಿತು. ಸದಸ್ಯೆ ಭಾಗ್ಯಲಕ್ಷ್ಮಿ, ತಮ್ಮ ವಾರ್ಡಿನ ಸಮಸ್ಯೆ ಬಗ್ಗೆ ಹೇಳುತ್ತಿರುವಾಗಲೇ ಸಮಸ್ಯೆ ಆಲಿಸದೆ ಅಧ್ಯಕ್ಷರು ಹಾಗೂ ಶಾಸಕರು, ‘ಮೈಕ್ ಇನ್ನೊಬ್ಬರಿಗೆ ಕೊಡಿ ಮಾತನಾಡೋಣ ಬಿಡಿ’ ಎಂದರು. ಇದು ಸದಸ್ಯೆಯರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಭಾರತಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಪರಮೇಶ್, ಮುಖ್ಯಾಧಿಕಾರಿ ನಜೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.