ADVERTISEMENT

ವಿಶ್ವ ಬೈಸಿಕಲ್‌ ದಿನ: 30 ವರ್ಷಗಳಿಂದ ಸೈಕಲ್‌ ಸಂಗ್ರಹ!

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 15:36 IST
Last Updated 3 ಜೂನ್ 2023, 15:36 IST
ಸುರೇಂದ್ರ ಬಾಬು ಬಳಿ ಇರುವ ಸೈಕಲ್‌ಗಳ ಸಂಗ್ರಹ
ಸುರೇಂದ್ರ ಬಾಬು ಬಳಿ ಇರುವ ಸೈಕಲ್‌ಗಳ ಸಂಗ್ರಹ   

ಕೆ.ಓಂಕಾರ ಮೂರ್ತಿ

ಕೋಲಾರ: ಕೆಲವರಿಗೆ ಕಾರು ಸಂಗ್ರಹದ ಹವ್ಯಾಸ, ಇನ್ನು ಕೆಲವರಿಗೆ ಅಂಚೆ ಚೀಟಿ ಸಂಗ್ರಹದ ಹವ್ಯಾಸ. ಆದರೆ, ಇಲ್ಲೊಬ್ಬ ಪೊಲೀಸ್‌ ಅಧಿಕಾರಿಗೆ ವಿಭಿನ್ನ ಹಾಗೂ ಹಳೆಯ ಸೈಕಲ್‌ ಸಂಗ್ರಹದ ಹವ್ಯಾಸ!

ಸೈಕಲ್‌ಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಕೋಲಾರದ ಸುರೇಂದ್ರ ಬಾಬು ಅವರ ಬತ್ತಳಿಕೆಯಲ್ಲಿ ಸುಮಾರು ಒಂಬತ್ತು ಹಳೆಯ ಸೈಕಲ್‌ಗಳಿವೆ. 30 ವರ್ಷಗಳಿಂದ ಅವರು ಈ ಹವ್ಯಾಸದಲ್ಲಿ ತೊಡಗಿದ್ದಾರೆ. ಇವರೀಗ ಡಿಎಆರ್‌ನಲ್ಲಿ ಎಆರ್‌ಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಇಂಗ್ಲೆಂಡ್‌ ರ‍್ಯಾಲಿಗ್‌, ಇಂಡಿಯನ್‌ ರ‍್ಯಾಲಿಗ್‌ (3), ರಾಬಿನ್‌ ಹುಡ್‌, ಬಿಎಸ್‌ಎ, ಅಟ್ಲಾಸ್‌ ಸೇರಿ 9 ಸೈಕಲ್‌ಗಳನ್ನು ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. 40 ವರ್ಷಗಳಷ್ಟು ಹಳತ್ತಾದ ಸೈಕಲ್‌ ಇವರ ಬಳಿ ಇವೆ. ಒಂದೊಂದು ಸೈಕಲ್‌ ಖರೀದಿ ಹಿಂದೆಯೂ ಒಂದು ಇತಿಹಾಸವಿದೆ.

ಅವರು ಪೊಲೀಸ್‌ ವಲಯದಲ್ಲಿ ಬಾಬಣ್ಣ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಪೊಲೀಸ್‌ ಕಾರ್ಯಕ್ರಮಗಳ ಛಾಯಾಗ್ರಾಹಕರೂ ಆಗಿದ್ದಾರೆ. ಶನಿವಾರ ‘ವಿಶ್ವ ಬೈಸಿಕಲ್‌ ದಿನ’ವೂ ಆಗಿರುವುದರಿಂದ ಅವರಿಗೆ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವರು ಶುಭಾಶಯ ಕೋರಿದರು.

‘ನನಗೀಗ 55 ವರ್ಷ. 30 ವರ್ಷಗಳ ಹಿಂದೆ ಅಂದರೆ 1993ರಲ್ಲಿ ಮೊದಲ ಸೈಕಲ್‌ ಖರೀದಿಸಿದ್ದೆ. ತಂದೆಗೆ ಸೈಕಲ್‌ಗಳೆಂದರೆ ಎಂದರೆ ಬಹಳ ಇಷ್ಟ. ಅವರೂ ಹಳೆ ಸೈಕಲ್‌ ಖರೀದಿಸಿ ಸಂಗ್ರಹಿಸಿಡುತ್ತಿದ್ದರು. ತಮ್ಮ ಸ್ನೇಹಿತರಿಗೆ ಮಾರುತ್ತಿದ್ದರು, ಅವುಗಳ ಬಗ್ಗೆಯೇ ಚರ್ಚಿಸುತ್ತಿದ್ದರು, ಇದನ್ನು ನೋಡಿ ನನಗೂ ಆಸಕ್ತಿ ಮೂಡಿತು. ನನ್ನ ಈ ಹವ್ಯಾಸಕ್ಕೆ ತಂದೆಯೇ ಪ್ರೇರಣೆ’ ಎಂದು ಸುರೇಂದ್ರ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಸೈಕಲ್‌ಗಳೆಂದರೆ ನನಗೆ ಪಂಚಪ್ರಾಣ. ಅವುಗಳ ಬಗ್ಗೆ ಏನೋ ಕುತೂಹಲ. ಅವು ನನಗೆ ಸ್ನೇಹಿತರಿದ್ದಂತೆ. 30 ವರ್ಷಗಳಿಂದ ಸೈಕಲ್‌ ಸಂಗ್ರಹದ ಕೆಲಸದಲ್ಲಿ ತೊಡಗಿದ್ದೇನೆ
ಸುರೇಂದ್ರ ಬಾಬು, ಎಆರ್‌ಎಸ್‌ಐ ಡಿಎಆರ್‌ ಕೋಲಾರ

ತಂದೆಯೂ ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಅವರ ಅಕಾಲಿನ ನಿಧಾನದ ಬಳಿಕ ಇವರಿಗೆ ಇಲಾಖೆಯಲ್ಲಿ ಕೆಲಸ ಲಭಿಸಿತು. ಕೆಲಸಕ್ಕೆ ಸೇರಿಯೇ 35 ವರ್ಷಗಳಾಗಿದೆ.

ಕೋಲಾರ ನಗರದ ಕಾರಂಜಿ ಕಟ್ಟೆಯಲ್ಲಿ ನೆಲೆಸಿರುವ ಸುರೇಂದ್ರ ಬಾಬು, ಪೊಲೀಸ್‌ ಕರ್ತವ್ಯಕ್ಕೆ ಹೊರತುಪಡಿಸಿ ಉಳಿದ ಕೆಲಗಳಿಗೆ ಸೈಕಲ್‌ನಲ್ಲೇ ಹೋಗುತ್ತಾರೆ. ವಾರಕ್ಕೊಂದು ಸೈಕಲ್‌ ಬಳಸುತ್ತಾರೆ. ಈಗಲೂ ಹಳೆ ಸೈಕಲ್‌ ಎಲ್ಲಾದರೂ ಕಂಡರೆ ಖರೀದಿ ಮಾಡುತ್ತಾರೆ.

‘ಸೈಕಲ್‌ ಖರೀದಿಗೆ ಯಾವುದೇ ದಾಖಲೆ ಪತ್ರ ಬೇಡ. ನೋಂದಣಿ, ಪರವಾನಗಿ ಅಗತ್ಯವಿರುವುದಿಲ್ಲ. ಹೀಗಾಗಿ, ಖರೀದಿ, ಸಂಗ್ರಹ ಸುಲಭ. ಆದರೆ, ಹಳೆಯ ಸೈಕಲ್‌ಗಳ ಬಿಡಿ ಭಾಗಗಳು ಸಿಗುತ್ತಿಲ್ಲ. ಕೆಟ್ಟು ಹೋದರೆ ಸಮಸ್ಯೆ ಆಗುತ್ತದೆ. ಹಳೆ ಸೈಕಲ್‌ಗಳನ್ನು ಖರೀದಿಸಿ ತರುತ್ತೇನೆಯೇ ಹೊರತು ಈಗಿರುವ ಸೈಕಲ್‌ ಮಾರುವುದಿಲ್ಲ’ ಎಂದರು.

ತಮ್ಮ ಸಂಗ್ರಹದ ಸೈಕಲ್‌ ಜೊತೆ ಸುರೇಂದ್ರ ಬಾಬು
ಸುರೇಂದ್ರ ಬಾಬು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.