ಕೋಲಾರ: ‘ಹೊಂದಾಣಿಕೆ ರಾಜಕಾರಣ ಮಾಡದೇ ಪಕ್ಷವನ್ನು ಬೇರುಮಟ್ಟದಿಂದ ಬಲಗೊಳಿಸಿ. ಬಲಿಷ್ಠ ಕಾರ್ಯಕರ್ತರ ಪಡೆ ನಿರ್ಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸಿ’ ಎಂದು ಬಿಜೆಪಿ ಮುಖಂಡ ಗಣೇಶ ಕಾರ್ಣಿಕ್ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಪಕ್ಷದ ಸಂಸ್ಥಾಪನಾ ದಿನಾಚರಣೆ, ಶ್ಯಾಂಪ್ರಸಾದ್ ಮುಖರ್ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಬಿಜೆಪಿಗೆ ಕಾರ್ಯಕರ್ತರೇ ಪಕ್ಷಕ್ಕೆ ಬಲ. ಅವರಿಂದಲೇ ಪಕ್ಷ ಇಷ್ಟೊಂದು ದೊಡ್ಡಮಟ್ಟದಲ್ಲಿ ಬೆಳೆದಿದೆ. ಮೋದಿ ಅವರು ದೇಶದಲ್ಲಿ ಕೈಗೊಂಡಿರುವ ಜನಸ್ನೇಹಿ ಕಾರ್ಯಕ್ರಮಗಳು ಹಿಂದಿನ ಯಾವುದೇ ಸರ್ಕಾರಕ್ಕೂ ಸಾಧ್ಯವಾಗಿರಲಿಲ್ಲ. ಅವುಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು’ ಎಂದು ಕಿವಿಮಾತು ಹೇಳಿದರು.
‘ಬಿಜೆಪಿ ಎಂದರೆ ರಾಷ್ಟ್ರಭಕ್ತಿ, ಶಿಸ್ತು, ಸಂಯಮ ಇರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ. ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವೆಂಬ ಹೆಗ್ಗಳಿಕೆ ಇದೆ. ಇಂತಹ ಪಕ್ಷ ಕಟ್ಟುವುದರ ಹಿಂದೆ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರ ಪರಿಶ್ರಮವಿದೆ’ ಎಂದರು.
‘ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಜನವಿರೋಧಿ ನೀತಿಗಳಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಕಾಂಗ್ರೆಸ್‍ನ ಗ್ಯಾರಂಟಿಗಳು ಜನರ ಜೀವನಕ್ಕೆ ಹೊರೆಯಾಗಿದ್ದು, ಇದರ ಕುರಿತು ಸಾಮಾನ್ಯ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಮಂಜುನಾಥಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ಕೊರತೆಯಿಲ್ಲ. ಆದರೆ ನಾಯಕರಾದವರು ಸರಿದಾರಿಯಲ್ಲಿ ಸಾಗಿದರೆ ಮಾತ್ರ ಪಕ್ಷ ಬಲಗೊಳ್ಳಲು ಸಾಧ್ಯ ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಇನ್ನಾದರೂ ಅಂತಹ ನಾಯಕರು ಹೊಂದಾಣಿಕೆ ರಾಜಕಾರಣ ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು’ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಜಿಲ್ಲೆಯಲ್ಲಿ ಪಕ್ಷವನ್ನು ಅತ್ಯಂತ ಪ್ರಾಮಾಣಿಕವಾಗಿ ಕಟ್ಟುವ ಕೆಲಸ ಮಾಡುವೆ. ಪಕ್ಷದ ಕಾರ್ಯಕರ್ತರಿಗೆ ನಾನು ಸದಾ ಲಭ್ಯವಿದ್ದು, ರಾಜ್ಯಮಟ್ಟದಿಂದ ನಾಯಕರನ್ನು ಕರೆಸಿ ಜಿಲ್ಲೆಯಲ್ಲಿ ಹಲವಾರು ಪಕ್ಷದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾರ್ಯಕರ್ತರ ವಿಶ್ವಾಸ ಉಳಿಸಿಕೊಂಡು ಮುನ್ನಡೆಯುವೆ’ ಎಂದು ಭರವಸೆ ನೀಡಿದರು.
‘ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳು, ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವುದು ನೋಡಿದಾಗ ಕಾರ್ಯಕರ್ತರು ಎದೆಗುಂದದೇ ಸಂಘಟಿತ ಹೋರಾಟ ನಡೆಸಿ ಸೂಕ್ತ ಉತ್ತರ ನೀಡಲು ಸಿದ್ಧರಾಗಿರಬೇಕು’ ಎಂದರು.
ಸಭೆಗೂ ಮುನ್ನಾ ಪಕ್ಷದ ಸಂಸ್ಥಾಪಕರಾದ ಶ್ಯಾಂಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ಸಚೇತಕ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್, ಅಪ್ಪಿರಾಜು, ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಮತಮ್ಮ, ಮುಖಂಡರಾದ ವಿಜಯಕುಮಾರ್, ತಿಮ್ಮರಾಯಪ್ಪ, ರಾಜೇಶ್‍ಸಿಂಗ್ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಇದ್ದರು.
ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಯಾರೂ ಮಾಡಬಾರದು. ಜಿಲ್ಲಾ ಹಂತದಲ್ಲಿ ಅಂತಹ ದೂರುಗಳು ಬಂದರೆ ಕಠಿಣ ನಿರ್ಧಾರ ಕೈಗೊಳ್ಳುಲಾಗುವುದು. ಕಾರ್ಯಕರ್ತರ ರಕ್ಷಣೆ ಅಗತ್ಯವಾಗಿದೆ.ಓಂಶಕ್ತಿ ಚಲಪತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ
ಜಿಲ್ಲೆಯಲ್ಲಿ ಪಕ್ಷದ ಕೆಲವು ಮುಖಂಡರ ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಈ ಕುರಿತು ಪಕ್ಷ ಗಮನಹರಿಸಬೇಕು.ಮಂಜುನಾಥಗೌಡ, ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.