ADVERTISEMENT

ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 4:20 IST
Last Updated 22 ನವೆಂಬರ್ 2020, 4:20 IST
ಶ್ರೀನಿವಾಸಪುರ ಹೊರವಲಯದ ವಿಐಪಿ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗವನ್ನು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ.ಕೆ.ಎನ್. ವೇಣುಗೋಪಾಲ್‌ ಉದ್ಘಾಟಿಸಿದರು
ಶ್ರೀನಿವಾಸಪುರ ಹೊರವಲಯದ ವಿಐಪಿ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗವನ್ನು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ.ಕೆ.ಎನ್. ವೇಣುಗೋಪಾಲ್‌ ಉದ್ಘಾಟಿಸಿದರು   

ಶ್ರೀನಿವಾಸಪುರ: ‘ಬಿಜೆಪಿ ಕಾರ್ಯಕರ್ತರು ಪ್ರಶಿಕ್ಷಣ ಪಡೆದು ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಭವಿಷ್ಯದ ನಾಯಕರಾಗಿ ರೂಪುಗೊಳ್ಳಬೇಕು’ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ.ಕೆ.ಎನ್‌. ವೇಣುಗೋಪಾಲ್‌ ಹೇಳಿದರು.

ಪಟ್ಟಣ ಹೊರವಲಯದ ವಿಐಪಿ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕರ್ತರು ಪಕ್ಷದ ನಿಜವಾದ ಆಸ್ತಿ. ಸಾಂಘಿಕ ಪ್ರಯತ್ನದ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.

ADVERTISEMENT

ಬಿಜೆಪಿ ಅತಿಹೆಚ್ಚು ಸಂಖ್ಯೆಯ ಕಾರ್ಯಕರ್ತರನ್ನು ಒಳಗೊಂಡಿರುವ ಏಕೈಕ ರಾಜಕೀಯ ಪಕ್ಷವಾಗಿದೆ. ವಿಚಾರ ಮರೆತು ಸ್ವಾರ್ಥಕ್ಕೆ ಇಂಬುಗೊಂಡರೆ ಯಾವುದೇ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ. ಕಾಂಗ್ರೆಸ್ ಇದಕ್ಕೆ ಉತ್ತಮ ನಿದರ್ಶನ ಎಂದರು.

ವಿಚಾರದಿಂದ ದೂರವಾಗಿ ವ್ಯಕ್ತಿ ಪೂಜೆಗೆ ಇಳಿದ ಪರಿಣಾಮ ಲೋಕಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಬಿಜೆಪಿ ವಿಚಾರಗಳಿಗೆ ಕಟ್ಟು ಬಿದ್ದುದರ ಫಲವಾಗಿ 303 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಬೂತ್‌ಮಟ್ಟದಲ್ಲಿ ಪಂಚರತ್ನಗಳನ್ನು ನೇಮಿಸಿದ್ದೇವೆ. ಕಾರ್ಯಕರ್ತರು ಪ್ರಶಿಕ್ಷಣ ವರ್ಗದ ಪೂರ್ಣ ಪ್ರಯೋಜನ ಪಡೆದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಪೂರಕವಾಗಿ ಕಾರ್ಯತಂತ್ರ ರೂಪಿಸಬೇಕು. ಮತದಾರರನ್ನು ಪಕ್ಷದ ಕಡೆ ಸೆಳೆಯಬೇಕು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯತೆಗೆ ಮೊದಲ ಆದ್ಯತೆ ನೀಡುತ್ತದೆ. ಸ್ವಾವಲಂಬಿ ಭಾರತ ನಿರ್ಮಾಣ ಅದರ ಗುರಿಯಾಗಿದೆ. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು. ಎಲ್ಲ ಹಂತಗಳಲ್ಲೂ ಪಕ್ಷದ ವರ್ಚಸ್ಸು ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಮುಖಂಡರಾದ ಕೃಷ್ಣಮೂರ್ತಿ, ಎಸ್‌.ವಿ. ಮುನಿವೆಂಕಟಪ್ಪ, ರಾಜೀವ್‌, ಎಂ. ಲಕ್ಷ್ಮಣಗೌಡ, ಅಶೋಕರೆಡ್ಡಿ, ವೆಂಕಟೇಗೌಡ, ಇ. ಶಿವಣ್ಣ, ವಿಐಪಿ ನಾಗರಾಜ್‌, ಜಯರಾಮರೆಡ್ಡಿ, ಶಿವಶಂಕರರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.