ಕೋಲಾರ: ‘ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಅವರದ್ದೇ ಪಕ್ಷದ ಮುಖಂಡ ಅನ್ವರ್ ಮಾಣಿಪ್ಪಾಡಿ ₹ 150 ಕೋಟಿ ಆಮಿಷದ ಆರೋಪ ಮಾಡಿದ್ದು, ಸಿಬಿಐ ಹಾಗೂ ಇ.ಡಿ ಏನು ಮಾಡುತ್ತಿವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಕ್ಫ್ ವಿಚಾರ ಮಾತನಾಡದಂತೆ ಒತ್ತಡ ಹೇರಿ ಅವರ ಮಗ ವಿಜಯೇಂದ್ರ ₹ 150 ಕೋಟಿ ಆಮಿಷವೊಡ್ಡಿದ್ದರು ಎಂಬುದಾಗಿ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ. ಇದೇ ವಿಚಾರವನ್ನು ಈ ಹಿಂದೆ ಆ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೇರೆ ಬೇರೆ ಸಂದರ್ಭದಲ್ಲಿ ಪರೋಕ್ಷವಾಗಿ ಹೇಳಿದ್ದಾರೆ’ ಎಂದರು.
‘ಸುಳ್ಳು ಆರೋಪಿಗಳಿಗೆಲ್ಲಾ ಇ.ಡಿ ಹಾಗೂ ಸಿಬಿಐ ಕಾಂಗ್ರೆಸ್ ಮುಖಂಡರಿಗೆ ನೋಟಿಸ್ ನೋಡುತ್ತಿವೆ. ಬಿಜೆಪಿ ಮುಖಂಡರ ಮೇಲೆ ಇಷ್ಟೆಲ್ಲಾ ಆರೋಪ ಇರುವಾಗ ತನಿಖಾ ಸಂಸ್ಥೆಗಳು ಸುಮ್ಮನೇ ಏಕೆ ಕುಳಿತಿವೆ? ಸಿಬಿಐ, ಇ.ಡಿ ಇರುವುದು ಕಾಂಗ್ರೆಸ್ ಮುಖಂಡರನ್ನು ಟಾರ್ಗೆಟ್ ಮಾಡಲು ಮಾತ್ರವೇ? ಈ ಸಂಸ್ಥೆಗಳಿಗೆ ಸಾಂವಿಧಾನಿಕ ಜವಾಬ್ದಾರಿ ಇದ್ದರೆ ತನಿಖೆ ಮಾಡಬೇಕು. ಇದೇ ವಿಚಾರವನ್ನು ಮುಖ್ಯಮಂತ್ರಿ ಕೂಡ ಹೇಳಿದ್ದಾರೆ’ ಎಂದು ನುಡಿದರು.
‘ವಿಜಯೇಂದ್ರ ಮೇಲೆ ನಾವು ಆರೋಪ ಮಾಡುತ್ತಿರುವುದಲ್ಲ. ಬಿಜೆಪಿ ನಾಯಕರೇ ಎತ್ತಿರುವ ವಿಚಾರವನ್ನು ನಾವು ಪ್ರಸ್ತಾಪ ಮಾಡಿದ್ದೇವೆ. ಜನರಿಗೆ ಸತ್ಯ ಗೊತ್ತಾಗಲು ಸಿಬಿಐ ತನಿಖೆ ನಡೆಯಬೇಕು’ ಎಂದರು.
‘ಅದಾನಿ ₹ 2,500 ಕೋಟಿ ಲಂಚ ಕೊಟ್ಟಿದ್ದಾರೆ ಎಂಬುದಾಗಿ ಅಮೆರಿಕದಲ್ಲಿ ಎಫ್‌ಐಆರ್ ಆಗಿದೆ. ಆದರೆ, ಈವರೆಗೆ ಇ.ಡಿ ಏನೂ ಮಾಡಿಲ್ಲ. ಈ ಪ್ರಕರಣದಲ್ಲಿ ಏಕೆ ತನಿಖೆ ನಡೆಯಬಾರದು? ಕಾಂಗ್ರೆಸ್‌ನವರಿಗೆ ಮಾತ್ರ ನೋಟಿಸ್, ಕಾಂಗ್ರೆಸ್‌ನವರ ಮೇಲೆ ಮಾತ್ರ ಸಿಬಿಐ ಹಾಗೂ ಇ.ಡಿ ಪ್ರಕರಣ ದಾಖಲಿಸುವುದೇ? ಈ ವಿಚಾರ ಕಣ್ಣಿಗೆ ಕಾಣುತ್ತಿಲ್ಲವೇ?’ ಎಂದು ಕೇಳಿದರು.
‘ಬಿಜೆಪಿ ಸರ್ಕಾರದಲ್ಲಿ ಕೋವಿಡ್ ಹೆಣದಲ್ಲಿ ಹಣ ಮಾಡಿದ್ದನ್ನು ಮರೆಯಬೇಕೇ? ಹಣ ಮಾಡಲು ಇತಿಮಿತಿ ಇರಬೇಕು. ಯಾರೂ ಸಾಚಾ ಅಲ್ಲ. ಆದರೆ. ಜನ ಸಾವು ನೋವು ಅನುಭವಿಸುತ್ತಿದ್ದಾಗಲೂ ಹಣ ಮಾಡಿದ ಈ ಸಂಸ್ಕೃತಿ ನೋಡಿಕೊಂಡು ಬಿಟ್ಟುಬಿಡಬೇಕೇ? ಹೆಚ್ಚು ಹಣ ನೀಡಿ ಕಳಪೆ ಸಾಮಗ್ರಿ ತಂದು ಭ್ರಷ್ಟಾಚಾರ ಎಸಗಿದ್ದಾರೆ. ಕೋವಿಡ್‌ನಲ್ಲಿ ನೂರಾರು ಕೋಟಿ ರೂಪಾಯಿ ನುಂಗಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದರು.
‘ಕೋವಿಡ್‌ನಂಥ ಭಯಾನಕ ಕಾಯಿಲೆ ಬಂದಾಗಲೂ ಅಂದಿನ ಸರ್ಕಾರ ದುಡ್ಡು ಮಾಡಲು ನಿಂತಿದ್ದು ಮಾನವೀಯ ಧರ್ಮವೇ? ಇವರು ಮನುಷ್ಯರೋ, ರಾಕ್ಷಸರೋ? ಹಿಂದೂ ಧರ್ಮದ ಹೆಸರು ಹೇಳಿಕೊಂಡು ವೋಟು ಹಾಕಿಸಿಕೊಳ್ಳುವವರು ಹಿಂದೂ ಧರ್ಮಕ್ಕೆ ಮಾಡಿದ ಅಪಚಾರವಲ್ಲವೇ? ಹೆಣದ ಮೇಲೆ ದುಡ್ಡು ಮಾಡುವುದು ಧರ್ಮಕ್ಕೆ ವಿರುದ್ಧವಲ್ಲವೇ’ ಎಂದು ಪ್ರಶ್ನಿಸಿದರು.
‘ಜನ ಸತ್ತರೂ ಪರವಾಗಿಲ್ಲ, ದುಡ್ಡು ಮಾಡಿದರೂ ಪರವಾಗಿಲ್ಲ ಸುಮ್ಮನಿರಬೇಕು ಎಂಬ ನಿಲುವು ಬಿಜೆಪಿಯವರಿಗೆ, ಜಗದೀಶ ಶೆಟ್ಟರ್ ಅವರಿಗೆ ಸರಿ ಕಾಣಬಹುದು’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.