ADVERTISEMENT

ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಜನ್ಮ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:38 IST
Last Updated 13 ಫೆಬ್ರುವರಿ 2019, 14:38 IST
   

ಕೋಲಾರ: ‘ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಜನ್ಮ ಶತಮಾನೋತ್ಸವವನ್ನು ತಾಲ್ಲೂಕಿನ ಬೆಳ್ಳೂರು ಗ್ರಾಮದ ಯೋಗಾಚಾರ್ಯ ಸಭಾಂಗಣದಲ್ಲಿ ಫೆ.16ರಂದು ಸಂಜೆ 4ಕ್ಕೆ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ. ‘ದಿವಂಗತ ಬಿಕೆಎಸ್ ಅಯ್ಯಂಗಾರ್ ಅವರು 1967ರಲ್ಲಿ ಬೆಳ್ಳೂರಿನಲ್ಲಿ ಸರ್ಕಾರಿ ಶಾಲೆ ಆರಂಭಿಸಿ, ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬಡ ಜನರ ಆರಾಧ್ಯ ದೈವವಾಗಿದ್ದ ಅವರು ಬೆಳ್ಳೂರು ಭಾಗದಲ್ಲಿ ವೈದ್ಯಕೀಯ ಸೇವೆಗಾಗಿ ಆಸ್ಪತ್ರೆ ಸ್ಥಾಪಿಸಿದರು’ ಎಂದರು.

‘ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿರುವ ಅವರ ಸ್ಮರಣೆಗಾಗಿ ಜನ್ಮ ಶತಮಾನೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳ್ಳೂರಿನ ರಮಾಮಣಿ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರು ರಾಜರಾಜೇಶ್ವರಿ ನಗರದ ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ ಸಾನಿಧ್ಯ ವಹಿಸುತ್ತಾರೆ’ ಎಂದು ವಿವರಿಸಿದರು.

ADVERTISEMENT

‘ಸಿಬಿಐ ನಿವೃತ್ತ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಂ.ಎಫ್.ಸಲ್ಡಾನಾ, ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್, ಎಸ್.ಎಲ್.ಕೆ ಸಂಸ್ಥೆ ಅಧ್ಯಕ್ಷ ಪಾರ್ಥ ಅಮೀನ್ ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಲಕೋಟೆ ಬಿಡುಗಡೆ: ‘28 ದೇಶಗಳ 128 ಮಂದಿ ಯೋಗ ಗುರುಗಳು, ಫ್ರಾನ್ಸ್‌ನ ಖ್ಯಾತ ಯೋಗ ಗುರು ಎಸ್.ಎಸ್.ಬಿರಿಯಾ ಯೋಗ ಕುರಿತು ವಿಶೇಷ ತರಬೇತಿ ನೀಡುತ್ತಾರೆ. ಕಾರ್ಯಕ್ರಮದಲ್ಲಿ ಬಿಕೆಎಸ್ ಅಯ್ಯಂಗಾರ್ ಹೆಸರಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುತ್ತಿದೆ. ಅಯ್ಯಂಗಾರ್‌ ಅವರ ಸ್ಮರಣ ಸಂಚಿಕೆಯೂ ಬಿಡುಗಡೆಯಾಗಲಿದೆ’ ಎಂದು ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಅಯ್ಯಂಗಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.