ADVERTISEMENT

ಬ್ಲ್ಯಾಕ್‌ಮೇಲ್ ಬಿಟ್ಟು ಕೆಲಸ ಮಾಡಿ: ಸಿಎಂ ವಿರುದ್ಧ ಮುನಿಸ್ವಾಮಿ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಮುನಿಸ್ವಾಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 12:41 IST
Last Updated 12 ಜುಲೈ 2023, 12:41 IST
ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ   

ಕೋಲಾರ: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ತನಿಖೆ ನೆಪದಲ್ಲಿ ವಿರೋಧ ಪಕ್ಷದವರನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ. ಅದನ್ನು ಬಿಟ್ಟು ಐದು ಗ್ಯಾರಂಟಿಗಳ ಜಾರಿ ಮಾಡಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರ ಹೊರವಲಯದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ತಾವಲ್ಲದೇ; ತಮ್ಮ ಆಪ್ತ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಹಲವರಿಂದ ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದರು.

‘ಯಾವುದೇ ಯೋಜನೆ ಬಗ್ಗೆ ತನಿಖೆ ಮಾಡಲಿ ನಾವು ಬೇಡ ಎನ್ನಲ್ಲ. ತಾವು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಿಂದಲೂ ತನಿಖೆ ನಡೆಯಲಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಮುಂದಿಟ್ಟುಕೊಂಡು ನಮ್ಮ ಬಿಜೆಪಿ ಮೇಲೆ ಶೇ 40 ಕಮಿಷನ್‌ ಸರ್ಕಾರ ಎಂದು ಗೂಬೆ ಕೂರಿಸಿದಿರಿ. ಈ ತಮ್ಮ ಸರ್ಕಾರದ ಸಚಿವರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಹಿಂದೂ ಕಾರ್ಯಕರ್ತರ ಕೊಲೆಯಾಗಿದ್ದು, ಕ್ರಮ ಕೈಗೊಂಡಿಲ್ಲ. ಕೇವಲ 2 ತಿಂಗಳಲ್ಲಿಯೇ ಈ ಸರ್ಕಾರ ವಿಫಲವಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಅಧಿಕಾರದಲ್ಲಿ ಇರಲು ತಮಗೆ ನೈತಿಕತೆ ಇಲ್ಲ. ಬ್ಲ್ಯಾಕ್‍ಮೇಲ್, ಬೆದರಿಕೆ ಎನ್ನುವುದು ಹಳೆಯ ತುಕ್ಕು ಹಿಡಿದಿರುವಂತಹ ಅಸ್ತ್ರಗಳಾಗಿದ್ದು, ಅವುಗಳನ್ನು ಬಿಟ್ಟು ಹೊಸ ಬಾಣ ಪ್ರಯೋಗಿಸಲು ಮುಂದಾಗಿ’ ಎಂದರು.

ಕೆಜಿಎಫ್‌ನಲ್ಲಿ ಬಿಜೆಪಿಯಿಂದ ಅಭಿವೃದ್ಧಿ: ‘ಈ ಹಿಂದೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ ಕೆಜಿಎಫ್‌ನಲ್ಲಿ ಅಭಿವೃದ್ಧಿ ಕೆಲಸ ನಡೆದಿದೆ. 12,600 ಎಕರೆ ಜಾಗದಲ್ಲಿ ಟೌನ್‍ಶಿಪ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಶಾಸಕಿ ರೂಪಕಲಾ ನಮ್ಮ ಜತೆಗಿದ್ದರು. ಕೇಂದ್ರ ಸಚಿವರಿಗೆ ಮನವಿ ನೀಡಿದಾಗ ಮನೆಗಳನ್ನು ಆ ಜಾಗದಲ್ಲಿ ಮಾಡಿಕೊಡಲು ನೋಟಿಸ್‍ ನೀಡಲಾಗಿದೆ’ ಎಂದು ಹೇಳಿದರು.

‘ಈಗ ನೋಡಿದರೆ ಶಾಸಕರು ತಾನೇ ಮಾಡಿರುವುದು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಕೆಜಿಎಫ್‍ನ 30 ಕಾರ್ಮಿಕರಿಗೆ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಪತ್ರ ಕೊಡಿಸುವವರೆಗೂ ನಿರಂತರವಾಗಿ ಕೆಲಸ ಮಾಡುತ್ತೇವೆ’ ಎಂದರು.

ಆಶ್ವಾಸನೆ ಈಡೇರಿಸುವುದು ಬಿಟ್ಟು ಜನರ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಲು ಹೊರಟಿರುವುದು ಗ್ಯಾರಂಟಿಗಳಿಂದ ಎಸ್ಕೇಪ್ ಆಗುವುದಕ್ಕೆ ಹೂಡುತ್ತಿರುವ ಅಸ್ತ್ರದಂತೆ ಕಾಣುತ್ತಿದೆ ಎಸ್‌.ಮುನಿಸ್ವಾಮಿ ಸಂಸದ

‘ಯಾವ ಲೋಕದಿಂದ ಅಭ್ಯರ್ಥಿ ತರುತ್ತೀರಿ?’ ‘ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರೇ ಸ್ಪರ್ಧೆ ಮಾಡಲಿ. ಹೊಸ ಅಭ್ಯರ್ಥಿ ಎಂದರೆ ಯಾವ ಲೋಕದಿಂದ ತರುತ್ತಾರಂತೆ’ ಎಂದು ಮುನಿಸ್ವಾಮಿ ಪ್ರಶ್ನಿಸಿದರು. ಕೋಲಾರಕ್ಕೆ ಕಾಂಗ್ರೆಸ್‌ನಿಂದ ಯಾರೂ ನಿರೀಕ್ಷಿಸಿರದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದಾಗಿ ಈಚೆಗೆ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದ್ದರು. ‘ಎಸ್.ಎನ್ ಆಗಲಿ ಇನ್ನೊಬ್ಬರಾಗಲೀ ಅವರ ಮಗನಾಗಲೀ ಕೆ.ಎಚ್.ಮುನಿಯಪ್ಪ ಅವರ ಮಕ್ಕಳು ಸೇರಿದಂತೆ ಯಾರು ಬೇಕಾದರೂ ಸ್ಪರ್ಧಿಸಲಿ‌ ನಮಗೆ ಭಯವಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ತಪ್ಪು ಮಾಡಿರುವ ಅರಿವು ಜನರಿಗಿದ್ದು ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ’ ಎಂದು ಸಂಸದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.