ADVERTISEMENT

ಗ್ರಾಮೀಣ ಭಾಗದಲ್ಲಿ ದಿಗ್ಬಂಧನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:33 IST
Last Updated 26 ಮಾರ್ಚ್ 2020, 16:33 IST
ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮಸ್ಥರು ಕೊರೊನಾ ಸೋಂಕು ತಡೆಗಾಗಿ ಗ್ರಾಮಕ್ಕೆ ಹೊರಗಿನ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲು ರಸ್ತೆಗೆ ಮಣ್ಣು ಸುರಿದು ಬಂದ್ ಮಾಡಿರುವುದು.
ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮಸ್ಥರು ಕೊರೊನಾ ಸೋಂಕು ತಡೆಗಾಗಿ ಗ್ರಾಮಕ್ಕೆ ಹೊರಗಿನ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲು ರಸ್ತೆಗೆ ಮಣ್ಣು ಸುರಿದು ಬಂದ್ ಮಾಡಿರುವುದು.   

ಕೋಲಾರ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನರು ದಿಗ್ಬಂಧನ ವಿಧಿಸಿ ಹಳ್ಳಿಗಳ ರಸ್ತೆಗಳನ್ನು ಗುರುವಾರ ಬಂದ್ ಮಾಡಿದರು.

ನಗರ ಪ್ರದೇಶದಲ್ಲಿ ಜನರು ಮನೆಯಿಂದ ಹೊರ ಬಾರದಂತೆ ಆದೇಶವಿದ್ದರೂ ದಿನನಿತ್ಯದ ವಸ್ತುಗಳ ಖರೀದಿಗಾಗಿ ಬೈಕ್‌, ಕಾರುಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು. ಆದರೆ, ಗ್ರಾಮೀಣ ಪ್ರದೇಶದ ಜನರು ತಮ್ಮ ಗ್ರಾಮಗಳ ಮುಖ್ಯ ರಸ್ತೆಯನ್ನೇ ಬಂದ್ ಮಾಡಿ ಯಾರೂ ಊರಿಂದ ಹೊರಗೆ ಹೋಗದಂತೆ ಮತ್ತು ಹೊರಗಿನವರು ಗ್ರಾಮದೊಳಗೆ ಬರದಂತೆ ಸ್ವಯಂ ದಿಗ್ಬಂಧನ ವಿಧಿಸಿಕೊಂಡರು.

ಕ್ಯಾಲನೂರು ಗ್ರಾಮದ ಜನರು ಊರಿನ ಮುಖ್ಯ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಮತ್ತು ಮರದ ದಿಮ್ಮಿಗಳನ್ನು ಹಾಕಿ ಬಂದ್ ಮಾಡಿದರು. ಕೊರೊನಾ ಸೋಂಕಿನ ತಡೆಗೆ ಗ್ರಾಮಸ್ಥರು ಕೈಗೊಂಡ ಈ ನಿರ್ಧಾರ ಒಳ್ಳೆಯದಾರರೂ ಅಕ್ಕಪಕ್ಕದ ಗ್ರಾಮಗಳ ಜನರು ತೊಂದರೆ ಅನುಭವಿಸಿದರು.

ADVERTISEMENT

ಕ್ಯಾಲನೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಇಲ್ಲಿಗೆ ಬಂದು ಪಡೆಯುವ ಪರಿಸ್ಥಿತಿಯಿದೆ. ಆದರೆ, ಗ್ರಾಮಸ್ಥರು ಬಂದ್‌ ಮಾಡಿರುವುದರಿಂದ ರೋಗಿಗಳನ್ನು ಕ್ಯಾಲನೂರು ಆಸ್ಪತ್ರೆಗೆ ಕರೆದೊಯ್ಯಲು ಸಮಸ್ಯೆಯಾಗಿದೆ. ಗಡಿ ಪರಿಶೀಲನೆಗಾಗಿ ಕ್ಯಾಲನೂರು ಕ್ರಾಸ್‌ಗೆ ಬಂದಿದ್ದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಸಾರ್ವಜನಿಕರು ದೂರು ನೀಡಿ ರಸ್ತೆ ತೆರವಿಗೆ ಮನವಿ ಮಾಡಿದರು.

ಚೆಲುವನಹಳ್ಳಿ ಹಾಗೂ ತಿಪ್ಪೇನಹಳ್ಳಿಯಲ್ಲೂ ಇದೇ ರೀತಿ ಗ್ರಾಮಸ್ಥರು ಊರಿನ ಪ್ರವೇಶ ಭಾಗದ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ.

ಜಿಲ್ಲಾಡಳಿತವು ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಜಿಲ್ಲೆಯ ಗಡಿ ಭಾಗದಲ್ಲಿ 19 ಕಡೆ ಚೆಕ್‌ಪೋಸ್ಟ್ ಆರಂಭಿಸಿ, ಅಂತರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಬರುವ ವಾಹನಗಳು ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಿದೆ. ಅಲ್ಲದೇ, ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿದೆ.

‘ಕೋವಿಡ್‌–19 ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಜನರು ಸಹಕಾರ ನೀಡಬೇಕು. ಕೊರೊನಾ ಸೋಂಕು ತಡೆಗೆ ಜನರು ಮನೆಗಳಲ್ಲೇ ಇರಬೇಕು’ ಎಂದು ಜಿಲ್ಲಾಧಿಕಾರಿಯು ಕ್ಯಾಲನೂರು ಕ್ರಾಸ್‌ ಬಳಿ ಗ್ರಾಮಸ್ಥರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.