ADVERTISEMENT

ರಕ್ತದಾನ: ಅಡ್ಡ ಪರಿಣಾಮವಿಲ್ಲ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 15:25 IST
Last Updated 10 ಮಾರ್ಚ್ 2020, 15:25 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಮಕ್ಕಳ ರಕ್ತ ಪರೀಕ್ಷೆ ಮಾಡಲಾಯಿತು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಮಕ್ಕಳ ರಕ್ತ ಪರೀಕ್ಷೆ ಮಾಡಲಾಯಿತು.   

ಕೋಲಾರ: ‘ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಆಗುವುದಿಲ್ಲ’ ಎಂದು ತಾಲ್ಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಎಚ್.ವಿ.ವಾಣಿ ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ಸ್ವಾಸ್ಥ್ಯಕಿರಣ ಯೋಜನೆಯಡಿ ನಡೆದ ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಶಿಬಿರದಲ್ಲಿ ಮಾತನಾಡಿದರು.

‘ಮನುಷ್ಯ ರಕ್ತ ನೀಡುವುದರಿಂದ ಸಣ್ಣಗಾಗುತ್ತಾನೆ ಎಂಬ ತಪ್ಪು ಭಾವನೆ ಬಿಡಬೇಕು. ರಕ್ತದಾನದಿಂದ ಜೀವ ಉಳಿಸಲು ಸಾಧ್ಯ. ನಾವು ಉಳಿಸಿದ ಜೀವವು ಸಾಕಷ್ಟು ಜೀವಗಳನ್ನು ಉಳಿಸುತ್ತದೆ. ಕಾಣದ ಕುಟುಂಬಕ್ಕೆ ನಾವು ಮಾಡುವ ರಕ್ತದಾನದಿಂದ ಉಪಯೋಗವಾಗುತ್ತದೆ. ಹಾಗಾಗಿ ರಕ್ತದಾನ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ತುರ್ತು ಸಂದರ್ಭದ ಅನಾಹುತ ತಪ್ಪಿಸಲು ವಿದ್ಯಾರ್ಥಿಗಳು ತಮ್ಮ ರಕ್ತದ ಗುಂಪು ತಿಳಿಯುವುದು ಅತಿ ಮುಖ್ಯ. ಶಾಲಾ ಆರೋಗ್ಯ ಚಟುವಟಿಕೆಯಡಿ ಪ್ರಮುಖವಾಗಿ ಮಕ್ಕಳಿಗೆ ರಕ್ತದ ಗುಂಪಿನ ಅರಿವು ನೀಡುವ ಅಗತ್ಯವಿದೆ. ಸರ್ಕಾರ ಪ್ರತಿ ವಿದ್ಯಾರ್ಥಿಗೂ ರಕ್ತ ಗುಂಪಿನ ಗುರುತಿನ ಚೀಟಿ ನೀಡುತ್ತಿದೆ’ ಎಂದು ವಿವರಿಸಿದರು.

‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳ ರಕ್ತದ ಗುರುತು ಪತ್ತೆ ಹಚ್ಚಿ ಗುರುತಿನ ಚೀಟಿ ನೀಡುವ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು’ ಎಂದು ತಿಳಿಸಿದರು.

ಹೆಚ್ಚು ವೆಚ್ಚ: ‘ರಕ್ತದ ಗುಂಪು ತಿಳಿಯಲು ಖಾಸಗಿ ಪ್ರಯೋಗಾಲಯಗಳಲ್ಲಿ ಹೆಚ್ಚಿನ ಹಣ ವೆಚ್ಚ ಮಾಡಬೇಕಾಗುತ್ತದೆ. ಈ ಕಾರಣಕ್ಕಾಗಿ ಸರ್ಕಾರವೇ ನೇರವಾಗಿ ಮಕ್ಕಳಿಗೆ ರಕ್ತದ ಗುಂಪಿನ ಗುರುತಿನ ಚೀಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ ಮನೋಹರ್ ಮಾಹಿತಿ ನೀಡಿದರು.

ಶಾಲೆಯ 115 ಮಕ್ಕಳ ರಕ್ತ ಪರೀಕ್ಷೆ ಮಾಡಿ ಗುರುತಿನ ಚೀಟಿ ನೀಡಲಾಯಿತು. ಶಾಲೆಯ ಶಿಕ್ಷಕರಾದ ಭವಾನಿ, ಶ್ವೇತಾ, ಸುಗುಣಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ವಸಂತಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.