ADVERTISEMENT

‘ಬಿಎಸ್‌ವೈ ಅಸಮರ್ಥ ಮುಖ್ಯಮಂತ್ರಿ’

ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ

​ಪ್ರಜಾವಾಣಿ ವಾರ್ತೆ
Published 17 ಮೇ 2021, 12:09 IST
Last Updated 17 ಮೇ 2021, 12:09 IST

ಕೋಲಾರ: ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಕಾಂಗ್ರೆಸ್‌ ಪಕ್ಷವು ಜಿಲ್ಲೆಯ ಕೆಜಿಎಫ್‌ ಮತ್ತು ಮಾಲೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಡ ಕುಟುಂಬಗಳಿಗೆ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸದಾ ಸುಳ್ಳು ಹೇಳುವ ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ. ಸುಳ್ಳು ಅವರ ಮನೆ ದೇವರು. ಅವರ ಕೈಯಲ್ಲಿ ಆಡಳಿತ ನಡೆಸೋಕೆ ಆಗೋದಿಲ್ಲ ಅಂದರೆ ಬಿಡಲಿ. ನಾವಾದರೂ ಅಧಿಕಾರಕ್ಕೆ ಬಂದು ಏನಾದ್ರೂ ಮಾಡ್ತಿದ್ವಿ’ ಎಂದು ಗುಡುಗಿದರು.

‘ಕೋವಿಡ್‌ 2ನೇ ಅಲೆ ಬಗ್ಗೆ ತಜ್ಞರ ಸಮಿತಿ ನವೆಂಬರ್‌ನಲ್ಲೇ ವರದಿ ಕೊಟ್ಟಿದ್ದರೂ ರಾಜ್ಯ ಸರ್ಕಾರ ಸೋಂಕು ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಂಡಿಲ್ಲ. ಸದಾ ಸುಳ್ಳು ಹೇಳುತ್ತಲೇ ಬಂದ ಸರ್ಕಾರ ತಜ್ಞರ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಮೊದಲು ಜೀವ ನಂತರ ಜೀವನ. ನಮ್ಮ ಸರ್ಕಾರ ಇದ್ದಿದ್ದರೆ 10 ಕೆ.ಜಿ ಅಕ್ಕಿ ಜತೆಗೆ ₹ 10 ಸಾವಿರ ಕೊಟ್ಟು ಆರಾಮಾಗಿ ಮನೆಯಲ್ಲಿ ಇರಿ ಅಂತ ಲಾಕ್‌ಡೌನ್ ಮಾಡುತ್ತಿದ್ದೆವು. ಆದರೆ, ಬಿಜೆಪಿ ಸರ್ಕಾರ ಅಕ್ಕಿ ನಿಲ್ಲಿಸಿದೆ. ಇಂತಹ ಮಾನಗೆಟ್ಟ, ದಪ್ಪ ಚರ್ಮದ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ. ಲಾಕ್‌ಡೌನ್‌ ಸಂಕಷ್ಟದಲ್ಲಿ ಪ್ಯಾಕೇಜ್ ಘೋಷಿಸಬೇಕಿತ್ತು. ಇವರಪ್ಪನ ಮನೆಯ ದುಡ್ಡೇನು ಕೊಡಲ್ಲ. ಜನರ ತೆರಿಗೆ ಹಣದಲ್ಲಿ ಆರ್ಥಿಕ ನೆರವು ಘೋಷಿಸಲಿ’ ಎಂದು ಆಗ್ರಹಿಸಿದರು.

‘ಸುಧಾಕರ್ ಅಂತ ಆರೋಗ್ಯ ಸಚಿವ ಇದ್ದಾನೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೂವರು ಸತ್ತಿದ್ದಾರೆ ಎಂದು ಆತ ಹೇಳಿದ್ದ. ಆದರೆ, ಆಸ್ಪತ್ರೆ ವೈದ್ಯರ ಹೇಳಿಕೆ ಪ್ರಕಾರ 28 ಜನ ಸತ್ತಿದ್ದಾರೆ. ಬಿಜೆಪಿಯವರು ಮಾನಗೆಟ್ಟ ಜನ. ರಾಜ್ಯದಲ್ಲಿ ಆಮ್ಲಜನಕ ಮತ್ತು ಕೋವಿಡ್‌ ಲಸಿಕೆ ಕೊರತೆಯಿದೆ. ರಾಜ್ಯಕ್ಕೆ 1,700 ಟನ್ ಆಮ್ಲಜನಕ ಬೇಕು. ಆದರೆ, ಕೇಂದ್ರ ಸರ್ಕಾರದಿಂದ ಕೇವಲ 800 ಟನ್‌ ಬರುತ್ತಿದೆ. ಸರ್ಕಾರಕ್ಕೆ ಏನು ಮಾಡಬೇಕೆಂದು ತಿಳಿಯದಾಗಿದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.