ADVERTISEMENT

ಕೋಲಾರ: ಚರಂಡಿ ನೀರು ಇಂಗು ಗುಂಡಿ ನಿರ್ಮಿಸಿ: ಸಂಜೀವಪ್ಪ ಸೂಚನೆ

ಸಭೆಯಲ್ಲಿ ಪಿಡಿಒಗಳಿಗೆ ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 14:53 IST
Last Updated 1 ಸೆಪ್ಟೆಂಬರ್ 2020, 14:53 IST
ಕೋಲಾರದಲ್ಲಿ ಮಂಗಳವಾರ ನಡೆದ ಪಿಡಿಒಗಳ ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಮಾತನಾಡಿದರು.
ಕೋಲಾರದಲ್ಲಿ ಮಂಗಳವಾರ ನಡೆದ ಪಿಡಿಒಗಳ ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಮಾತನಾಡಿದರು.   

ಕೋಲಾರ: ‘ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಚರಂಡಿ ನೀರು ಇಂಗಿಸುವ ಗುಂಡಿ ನಿರ್ಮಾಣ ಕಾರ್ಯದ ಮಾಸಾಚರಣೆ ಆರಂಭಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು.

ಇಲ್ಲಿ ಮಂಗಳವಾರ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಎಲ್ಲಾ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಚರಂಡಿ ನೀರು ಇಂಗು ಗುಂಡಿ ನಿರ್ಮಿಸುವಂತೆ ಸೂಚಿಸಿದ್ದಾರೆ’ ಎಂದು ತಿಳಿಸಿದರು.

‘₹ 17 ಸಾವಿರ ವೆಚ್ಚದಲ್ಲಿ ಇಂಗು ಗುಂಡಿ ನಿರ್ಮಾಣ ಮಾಡಬೇಕು. ಈ ಸಂಬಂಧ ವ್ಯಾಪಕ ಪ್ರಚಾರ ನಡೆಸಬೇಕು. ಮೊದಲ ಹಂತದಲ್ಲಿ ಸಮುದಾಯ ಮಟ್ಟದಲ್ಲಿ ಹಾಗೂ ನಂತರ ವೈಯಕ್ತಿಕ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಪೌಷ್ಟಿಕ ಆಹಾರ ತೋಟ ನಿರ್ಮಾಣ ಮಾಡಬೇಕು. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಕೋಳಿ ಶೆಡ್ ನಿರ್ಮಿಸಲು ಒತ್ತು ನೀಡಬೇಕು. ಗ್ರಾ.ಪಂಗಳಲ್ಲಿ ಕ್ರಿಯಾ ಯೋಜನೆ ಅನ್ವಯ ನರೇಗಾ ಕೆಲಸ ವಿಳಂಬವಾಗುತ್ತಿದೆ. ಬಹುಪಾಲು ಕಾಮಗಾರಿಗಳು ಬಾಕಿಯಿವೆ. ಎಂಜಿನಿಯರ್‌ಗಳ ಸಮಸ್ಯೆ ಬಗೆಹರಿದಿರುವುದರಿಂದ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ನರೇಗಾ ಕಾಮಗಾರಿಗಳ ಸಂಬಂಧ ಚೆಕ್‌ಲಿಸ್ಟ್‌ ಇಟ್ಟುಕೊಂಡು ದಾಖಲೆಪತ್ರ ನಿರ್ವಹಣೆ ಮಾಡಲು ಸಮರ್ಥ ಪಿಡಿಒಗಳ ತಂಡ ರಚಿಸಿ ಗ್ರಾ.ಪಂಗಳಿಗೆ ಕಳುಹಿಸಬೇಕು. ದಾಖಲೆಪತ್ರ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯಬೇಕು’ ಎಂದು ಹೇಳಿದರು.

ಕರ ಬಾಕಿ ಪಾವತಿಸಿ: ‘ಗ್ರಾ.ಪಂಗಳು ಶಿಕ್ಷಣ, ಆರೋಗ್ಯ, ಗ್ರಂಥಾಲಯ ಕರ ಪಾವತಿಸದಿರುವ ಸಂಬಂಧ ಸಾಕಷ್ಟು ಆಕ್ಷೇಪಣೆಯಿದೆ. ಹಿಂದಿನ ಬಾಕಿ ಪಾವತಿಸುವುದು ಅನಿವಾರ್ಯ. ಗ್ರಾ.ಪಂ ಸಮಿತಿಯಲ್ಲಿ ನಿರ್ಣಯ ಕೈಗೊಂಡು ಶೀಘ್ರವೇ ಬಾಕಿ ಪಾವತಿಸಬೇಕು. ಮುಂದಿನ 3 ತಿಂಗಳೊಳಗೆ ಪ್ರತ್ಯೇಕ ತಂತ್ರಾಂಶ ಸಿದ್ಧಗೊಳ್ಳಲಿದ್ದು, ಆಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ’ ಎಂದರು.

‘ಜಿಲ್ಲೆಯ 156 ಗ್ರಾ.ಪಂಗಳ ವ್ಯಾಪ್ತಿಯಲ್ಲಿ 1994-95ರಿಂದ ಈವರೆಗೆ ಸರ್ಕಾರದ ಅನುದಾನ ಮತ್ತು ಸ್ಥಳೀಯ ಆರ್ಥಿಕ ಸಂಪನ್ಮೂಲ ಬಳಕೆಯಲ್ಲಿ ₹ 70 ಕೋಟಿಗೆ ಆಕ್ಷೇಪಣೆಯಿದೆ. ₹ 7 ಕೋಟಿ ವಸೂಲಾತಿ ಪತ್ರದಲ್ಲಿದೆ. ಭರವಸೆಗಳ ಸಮಿತಿ ಸಭೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪು ಸರಿಪಡಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ’ ಎಂದು ವಿವರಿಸಿದರು.

‘ಲೆಕ್ಕ ಪರಿಶೋಧಕರು 2014-15ನೇ ಸಾಲಿಗೆ ವ್ಯಕ್ತಪಡಿಸಿರುವ ಆಕ್ಷೇಪಣೆ, ತೀರುವಳಿ, ವಸೂಲಾತಿ ಸಂಬಂಧ ಆ ಅವಧಿಯಲ್ಲಿದ್ದ ಪಿಡಿಒ, ಎಂಜಿನಿಯರ್‌ಗಳಿಗೆ ನೋಟಿಸ್ ಜಾರಿ ಮಾಡಿ ದಾಖಲೆಪತ್ರ ಸರಿಪಡಿಸುವಂತೆ ಸೂಚಿಸಬೇಕು. ಶೀಘ್ರವೇ ಗ್ರಾ.ಪಂ ಸಮಿತಿ ಸಭೆ ಕರೆದು ಲೋಪ ಸರಿಪಡಿಸಬೇಕು. ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಭರವಸೆ ಸಮಿತಿ ಮುಂದೆ ಇವುಗಳನ್ನು ಮಂಡಿಸಬೇಕಿರುವುದರಿಂದ ಲೋಪ ಗಂಭೀರವಾಗಿ ಪರಿಗಣಿಸಿ’ ಎಂದು ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ಶಿಸ್ತುಕ್ರಮ ಜರುಗಿಸಿ: ‘ಕೆಲ ಪಿಡಿಒಗಳು ಸಭೆಗೆ ಗೈರಾಗಿದ್ದು, ಅನುದಾನ ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ವಡಗೂರು ಗ್ರಾ.ಪಂನಲ್ಲಿ 2 ವರ್ಷದಿಂದ ಜಮಾಬಂದಿ ನಡೆಸಿಲ್ಲ. 36 ಗ್ರಾ.ಪಂ ಪೈಕಿ 21 ಗ್ರಾ.ಪಂ ಹೊರತುಪಡಿಸಿ ಉಳಿದೆಡೆ ಬಾಪೂಜಿ ಸೇವಾ ಕೇಂದ್ರಗಳ ಸೇವೆ ಶೂನ್ಯವಾಗಿದೆ. ಇಂತಹ ಪಿಡಿಒಗಳ ಬಗ್ಗೆ ವರದಿ ನೀಡುತ್ತೇನೆ. ವರದಿ ಆಧರಿಸಿ ಪಿಡಿಒಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಕೋಲಾರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.