ADVERTISEMENT

ಸಮ್ಮೇಳನಕ್ಕೆ ಸಾಹಿತ್ಯಾಸಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 5:37 IST
Last Updated 18 ಆಗಸ್ಟ್ 2019, 5:37 IST
ಸಮ್ಮೇಳನದಲ್ಲಿ ತೆರೆಯಲಾಗಿದ್ದ ಪುಸ್ತಕ ಮಾರಾಟ ಮಳಿಗೆಗಳಿಗೆ ಸಾಹಿತ್ಯಾಸಕ್ತರು ಮುಗಿಬಿದ್ದರು.
ಸಮ್ಮೇಳನದಲ್ಲಿ ತೆರೆಯಲಾಗಿದ್ದ ಪುಸ್ತಕ ಮಾರಾಟ ಮಳಿಗೆಗಳಿಗೆ ಸಾಹಿತ್ಯಾಸಕ್ತರು ಮುಗಿಬಿದ್ದರು.   

ಕೋಲಾರ: ನಗರದಲ್ಲಿ ಶನಿವಾರ ಆರಂಭವಾದ ಚೊಚಲ್ಲ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಸಾಹಿತ್ಯಾಸಕ್ತರ ದಂಡೇ ಹರಿದುಬಂದಿತು. ಜಿಲ್ಲೆಯ ಜತೆಗೆ ಹೊರ ಜಿಲ್ಲೆಗಳ ಸಾಹಿತಿಗಳು, ಸಾಹಿತ್ಯಾಸಕ್ತರು, ಚಿಂತಕರು ಸಾಹಿತ್ಯ ಜಾತ್ರೆಗೆ ಮೆರುಗು ತುಂಬಿದರು.

ಟಿ.ಚನ್ನಯ್ಯ ರಂಗಮಂದಿರ ಆವರಣದಲ್ಲಿ ಬೆಳಿಗ್ಗೆ ರಾಷ್ಟ್ರಧ್ವಜ, ಪರಿಷತ್ತಿನ ಧ್ವಜ ಮತ್ತು ನಾಡ ಧ್ವಜಾರೋಹಣ ನಡೆಯಿತು. ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ರಾಷ್ಟ್ರ ಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಪರಿಷತ್ತಿನ ಧ್ಜಜಾರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ನಾಡ ಧ್ವಜಾರೋಹಣ ನೆರವೇರಿಸಿದರು.

ಸಮ್ಮೇಳನಾಧ್ಯಕ್ಷ ಎಲ್‌.ಹನುಮಂತಯ್ಯ ಅವರು ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಮ್ಮೇಳನದ ಸ್ಥಳಕ್ಕೆ ಬಂದರು.

ADVERTISEMENT

ಪುಸ್ತಕ ಪ್ರದರ್ಶನ: ಸಮ್ಮೇಳನ ಆಯೋಜನೆಯಾಗಿದ್ದ ರಂಗಮಂದಿರವು ಸಾಹಿತ್ಯಾಸಕ್ತರಿಂದ ತುಂಬಿ ಹೋಗಿತ್ತು. ರಂಗಮಂದಿರ ಮುಂಭಾಗದ ರಸ್ತೆಯ ಪಕ್ಕದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು. ಸಾಹಿತ್ಯಾಸಕ್ತರು ಪುಸ್ತಕ ಕೊಳ್ಳಲು ಮಳಿಗೆಗಳಿಗೆ ಮುಗಿಬಿದ್ದರು. ಸಮೀಪದಲ್ಲೇ ಗೃಹಾಲಂಕಾರ ಸಾಮಗ್ರಿಗಳು, ಖಾದಿ ವಸ್ತ್ರಗಳು, ಆಯುರ್ವೇದ ಔಷಧಗಳ ಮಳಿಗೆಗಳನ್ನು ತೆರೆಯಲಾಗಿತ್ತು.

ಸಮ್ಮೇಳನಕ್ಕೆ ಬಂದಿದ್ದ ಗಣ್ಯರು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಹಾಲಿಸ್ಟರ್‌ ಸಭಾಂಗಣ ಊಟದ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಿನ ಉಪಹಾರಕ್ಕೆ ದೋಸೆ, ಮಧ್ಯಾಹ್ನದ ಊಟಕ್ಕೆ ಹೋಳಿಗೆ, ಮೊಸರನ್ನ, ಪಲಾವ್‌, ಅನ್ನ ಸಾಂಬರು, ಕೋಸಂಬರಿ, ಮಜ್ಜಿಗೆ, ಉಪ್ಪಿನಕಾಯಿ ಖಾದ್ಯಗಳನ್ನು ಮಾಡಿಸಲಾಗಿತ್ತು. ಸ್ಥಳೀಯ ಕಲಾವಿದರು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.