ಮಾಲೂರು: ಸರ್ಕಾರಿ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಸರ್ಕಾರಿ ಶಾಲೆಗಳ ನಡುವೆ ಪಟ್ಟಣದ ಹೃದಯ ಭಾಗದಲ್ಲಿರುವ ಆಟದ ಮೈದಾನವನ್ನು ತಾತ್ಕಾಲಿಕವಾಗಿ ಬಸ್ ನಿಲ್ದಾಣ ಮಾಡಲು ಹೊರಟಿರುವ ತಾಲ್ಲೂಕು ಆಡಳಿತದ ಕ್ರಮ ಅವೈಜ್ಞಾನಿಕ ಎಂದು ಸಾರ್ವಜನಿಕರು ದೂರಿದ್ದಾರೆ.
ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಆಟದ ಮೈದಾನ ಸುಮಾರು ಎರಡು ಎಕರೆ ವಿಸ್ತೀರ್ಣದಲ್ಲಿದೆ. ಮೈದಾನದ ದಕ್ಷಿಣಕ್ಕೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಇದೆ. ಇಲ್ಲಿಗೆ ಪತ್ರಿನಿತ್ಯ ಸಾವಿರಾರು ಮಂದಿ ರೋಗಿಗಳು ಭೇಟಿ ನೀಡುತ್ತಾರೆ. ಜೊತೆಗೆ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಬಸ್‌ಗಳ ಶಬ್ದ ಹಾಗೂ ವಾಯುಮಾಲಿನ್ಯದಿಂದ ರೋಗಿಗಳಿಗೆ ತೊಂದರೆಯಾಗುತ್ತದೆ ಎಂಬುದು ಸಾರ್ವಜನಿಕರ ದೂರಾಗಿದೆ.
ಮೈದಾನದ ಉತ್ತರಕ್ಕೆ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಪೂರ್ವಕ್ಕೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ. ಪಶ್ಚಿಮಕ್ಕೆ ಉರ್ದು ಶಾಲೆಗಳಿವೆ. ಹಾಗಾಗಿ ಆ ಮೈದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣವಾದರೆ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎಂಬುದು ಪೋಷಕರ ಕಳವಾಗಿದೆ.
ನಗರದಲ್ಲಿ ಇರುವುದು ಎರಡೇ ಕ್ರೀಡಾಂಗಣ. ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಟದ ಮೈದಾನ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನ (ಹೋಂಡಾ ಕ್ರೀಡಾಂಗಣ). ಹೋಂಡಾ ಕ್ರೀಡಾಂಗಣದಲ್ಲಿ ಕ್ರಿಕ್ರಿಟ್, ಫುಟ್‌ಬಾಲ್, ಕಬಡ್ಡಿ, ಖೋಖೋ ಸೇರಿದಂತೆ ಗುಂಪು ಆಟಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ನಡೆಯುತ್ತವೆ. ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಹಿರಿಯರು ವಾಕಿಂಗ್ ಮಾಡುವುದು ಸೇರಿದಂತೆ ವಿದ್ಯಾರ್ಥಿಗಳ ಆಟ –ಪಾಠ ನಡೆಯುತ್ತವೆ. ಈಗ ತಾತ್ಕಾಲಿಕ ಬಸ್ ನಿಲ್ದಾಣದ ನಿರ್ಮಾಣದಿಂದ ವಿದ್ಯಾರ್ಥಿಗಳ ಕ್ರೀಡಾಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಂತಾಗಿದೆ.
ನಗರದ ಮುಖ್ಯ ರಸ್ತೆಯಿಂದ ಶಾಲಾ–ಕಾಲೇಜುಗಳಿಗೆ ಹೋಗುವ ರಸ್ತೆ ಬಹಳ ಕಿರಿದಾಗಿದ್ದು, ರಸ್ತೆ ಬದಿಗಳಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿರುತ್ತದೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಓಡಾಡುವುದೇ ಕಷ್ಟ. ಅಂತದರಲ್ಲಿ ಬಸ್ ಸಂಚಾರ ಆರಂಭವಾದರೆ ಮಕ್ಕಳು ಓಡಾಟಕ್ಕೆ ತುಂಬಾ ಕಷ್ಟವಾಗುತ್ತದೆ ಎಂಬುದು ಪೋಷಕರ ಆತಂಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.