ADVERTISEMENT

ಬಟನ್ಸ್ ಹೂವಿನ ಬೆಳೆ: ಸಮಗ್ರ ಕೃಷಿ ಪದ್ಧತಿ ಸೂಕ್ತ

ಸಣ್ಣ–ಅತಿ ಸಣ್ಣ ಕೃಷಿಕರಿಗೆ ಲಾಭದಾಯಕ: ಕಡಿಮೆ ಅವಧಿಯ ಬೆಳೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 13:30 IST
Last Updated 14 ಮೇ 2021, 13:30 IST

ಕೋಲಾರ: ಕಡಿಮೆ ಅವಧಿಯ ಬಟನ್ಸ್ ಹೂವಿನ ಬೆಳೆಯು ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಲಾಭದಾಯಕವಾಗಿದ್ದು, ಸಮಗ್ರ ಕೃಷಿ ಪದ್ಧತಿಯಲ್ಲಿ ಈ ಬೆಳೆ ಬೆಳೆಯಬಹುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಟನ್ಸ್‌ ಬಿಡಿ ಹೂ ಹಾಗೂ ಕಾಂಡಸಹಿತ ಹೂವುಗಳು ಬಳಕೆಯಲ್ಲಿವೆ. ರಾಜ್ಯದಲ್ಲಿ ತುಮಕೂರು, ಬೆಂಗಳೂರು, ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಗೂವು ಬೆಳೆಯಲಾಗುತ್ತಿದೆ. ಈ ಬೆಳೆಗೆ ಫಲವತ್ತಾದ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ ಎಂದು ಹೇಳಿದ್ದಾರೆ.

ಬಟನ್ಸ್‌ ಹೂವು ಬೆಳೆಯ ಬೇಸಾಯವನ್ನು ವರ್ಷವಿಡಿ ಮಾಡಬಹುದು. ಈ ಬೆಳೆಗೆ ತಂಪಾದ ವಾತಾವರಣ (ಚಳಿಗಾಲ) ತುಂಬಾ ಸೂಕ್ತವಾಗಿದ್ದು, ಮೇ ಮತ್ತು ಜೂನ್‌ ತಿಂಗಳಲ್ಲಿ ನಾಟಿ ಮಾಡಿದ ಬೆಳೆಯಿಂದ ಅತ್ಯುತ್ತಮ ಇಳುವರಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ರೈತರ ಅನುಕೂಲಕ್ಕಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೆಚ್ಚು ಇಳುವರಿ ನೀಡುವ ಕಾಮಿನಿ, ಪೂರ್ಣಿಮಾ, ವೈಲೆಟ್‍ಕುಷನ್, ಶಶಾಂಕ್, ಅರ್ಕಾಆಧ್ಯ ಮತ್ತು ಅರ್ಕಾ ಅರ್ಚನ ತಳಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೇ, ಫುಲೆ ಗಣೇಶ ವೈಟ್, ಫುಲೆ ಗಣೇಶ ಪಿಂಕ್, ಫುಲೆ ಗಣೇಶ ಪರ್ಪಲ್, ಫುಲೆ ಗಣೇಶ ವೈಲೆಟ್ ತಳಿ ಸಹ ಬೆಳೆಯಬಹುದು ಎಂದು ವಿವರಿಸಿದ್ದಾರೆ.

ಒಂದು ಹೆಕ್ಟೇರ್‌ ಪ್ರದೇಶಕ್ಕೆ 750 ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ. ಸಸಿ ಬೆಳೆಸಲು ಏರು ಮಡಗಳನ್ನು ತಯಾರಿಸಬೇಕು. ಒಂದು ಹೆಕ್ಟೇರ್‌ಗೆ ಅಗತ್ಯವಿರುವ ಸಸಿಗಳನ್ನು 7.5 ಮೀಟರ್‌ ಉದ್ದ, 1.2 ಮೀಟರ್‌ ಅಗಲ ಮತ್ತು 30 ಸೆಂ.ಮೀ ಎತ್ತರದ 4 ಏರು ಮಡಿಗಳಲ್ಲಿ ಬೆಳೆಸಬಹುದು. ಏರು ಮಡಿಗಳನ್ನು ಶೇ 0.2 ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸಬೇಕು. ಬೀಜವನ್ನು ತೆಳುವಾಗಿ (0.6 ಮೀ ಆಳಕ್ಕೆ) ಹಾಕಿದ ನಂತರ ಸಣ್ಣ ಗಾತ್ರದ ಮರಳು ಅಥವಾ ತೆಂಗಿನ ಒಟ್ಟಿನಿಂದ ಮುಚ್ಚಿ ನೀರು ಸಿಂಪಡಿಸಬೇಕು. ಸಸಿಗಳು 4ರಿಂದ 6 ವಾರದಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ ಎಂದು ತಿಳಿಸಿದ್ದಾರೆ.

ಬೇಸಾಯ ಕ್ರಮ: ಬಟನ್ಸ್‌ ಹೂವು ಬೆಳೆಯಲು ಆಯ್ಕೆ ಮಾಡಿರುವ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಒಂದು ಹೆಕ್ಟೇರ್‌ಗೆ 20 ಟನ್ ಕೊಟ್ಟಿಗೆ ಗೊಬ್ಬರ, 9 ಕೆ.ಜಿ ಸಾರಜನಕ, 120 ಕೆ.ಜಿ ರಂಜಕ ಮತ್ತು 60 ಕೆ.ಜಿ ಪೊಟ್ಯಾಷ್ ಸತ್ವವುಳ್ಳ ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಸೇರಿಸಿ ಭೂಮಿಯನ್ನು ಹದ ಮಾಡಿಕೊಂಡು 30 ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ ಒಂದು ತಿಂಗಳ ನಂತರ ಕುಡಿ ಚಿವುಟಿ ಹೆಕ್ಟೇರ್‌ಗೆ 9 ಕೆ.ಜಿ ಸಾರಜನಕವನ್ನು ಮೇಲು ಗೊಬ್ಬರವಾಗಿ ಮಣ್ಣಿಗೆ ಸೇರಿಸಬೇಕು. ಮಣ್ಣು ಮತ್ತು ಹವಾಗುಣದ ಅನುಗುಣವಾಗಿ 5ರಿಂದ 7 ದಿನ ಅಂತರದಲ್ಲಿ ನೀರು ಹಾಯಿಸಬೇಕು ಎಂದು ಹೇಳಿದ್ದಾರೆ.

ಇಳುವರಿ: ನಾಟಿಯಾದ ಮೂರುವರೆ ಅಥವಾ 4 ತಿಂಗಳಲ್ಲಿ ಹೂವು ಕೊಯ್ಲಿಗೆ ಬರುತ್ತದೆ. ಹೆಕ್ಟೇರ್‌ಗೆ 10 ರಿಂದ 12.50 ಟನ್ ಹೂವಿನ ಇಳುವರಿ ಪಡೆಯಬಹುದು. ಹೆಕ್ಟೇರ್‌ಗೆ ಸುಮಾರು ₹ 20 ಸಾವಿರ ವೆಚ್ಚವಾಗುತ್ತದೆ. ಪೂರ್ತಿ ಅರಳಿದ ಹೂವುಗಳನ್ನು ತೊಟ್ಟು ಸಹಿತ ಅಥವಾ ತೊಟ್ಟು ರಹಿತವಾಗಿ ಕೊಯ್ಲು ಮಾಡಬಹುದು. ಇಡೀ ಸಸ್ಯವನ್ನು ಕಿತ್ತಾಗ ಕೆಳಗಿನ ಹಾಗೂ ಹಾಳಾದ ಎಲೆಗಳನ್ನು ತೆಗೆದು ಸ್ವಚ್ಛ ನೀರಿರುವ ಬಕೆಟ್‌ನಲ್ಲಿ ತಕ್ಷಣವೇ ಇರಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಸಂರಕ್ಷಣಾ ಕ್ರಮ: ಹೇನು, ಥ್ರಿಪ್ಸ್, ಎಲೆ ತಿನ್ನುವ ಹುಳು, ಎಲೆ ಚುಕ್ಕೆ ರೋಗ, ಸೊರಗು ರೋಗ ಮತ್ತು ಹೂ ಅಂಗಮಾರಿ ರೋಗವು (ನಂಜು ರೋಗ) ಬಟನ್ಸ್‌ ಹೂವು ಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಚೆನ್ನಾಗಿ ನೀರು ಬಸಿದು ಹೋಗುವಂತೆ ಮಾಡಿ ಬೆಳೆಯನ್ನು ಸೊರಗು ರೋಗದಿಂದ ರಕ್ಷಿಸಬೇಕು. ಸೊರಗು ರೋಗದ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬೆಂಡೇಜಿಂ ಬೆರೆಸಿ ತೋಯಿಸಬೇಕು ಎಂದು ತಿಳಿಸಿದ್ದಾರೆ.

ಹೇನು, ಥ್ರಿಪ್ಸ್ ಹಾಗೂ ಎಲೆ ಚುಕ್ಕೆ ರೋಗ ಕಂಡುಬಂದಾಗ ಬೆಳಿಗ್ಗೆ 2 ಮಿ.ಲೀ ಮಿಥೈಲ್ ಪ್ಯಾರಾಥಿಯಾನ್ ಮತ್ತು 2 ಗ್ರಾಂ ಮ್ಯಾಂಕೋಜೆಬ್‌ ಅನ್ನ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೆಕು. ಬೇವಿನ ಬೀಜದ ಕಷಾಯ ಅಥವಾ 1 ಮಿ.ಲೀ ಆಕ್ಸಿಡೆಮಿಟಾನ್ ಮಿಥೈಲ್ ಅನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಹೂವು ಮತ್ತು ಕಾಯಿ ಕೊರಕ ಹುಳಗಳನ್ನು ನಿಯಂತ್ರಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಹೂವುಗಳು ಸಂಪೂರ್ಣವಾಗಿ ಎಲೆಗಳಾಗಿ ಪರಿವರ್ತನೆಯಾಗುವ ಅಂಗಮಾರಿ ರೋಗವು ಬಹಳಷ್ಟು ಆರ್ಥಿಕ ನಷ್ಟವುಂಟು ಮಾಡುತ್ತದೆ. ರೋಗ ಕಾಣಿಸಿಕೊಂಡ ಗಿಡಗಳನ್ನು ಕಿತ್ತೊಗೆದು ಇತರೆ ಗಿಡಗಳಿಗೆ ಹರಡದಂತೆ ಅಂತರವ್ಯಾಪಿ ಕೀಟನಾಶಕ ಮಾನೊಕ್ರೋಟೋಪಾಸ್ 2 ಮಿ.ಲೀ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಅಥವಾ 7829512236 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.