ADVERTISEMENT

ಗೊಂದಲದ ಗೂಡಾದ ಬಿಜೆಪಿ ಜನಾಂದೋಲನ

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ: ವಹಿವಾಟು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 16:12 IST
Last Updated 4 ಜನವರಿ 2020, 16:12 IST
ಪೌರತ್ವ ಕಾಯ್ದೆ ಬೆಂಬಲಿಸಿ ಕೋಲಾರದಲ್ಲಿ ಶನಿವಾರ ನಡೆದ ಜನಾಂದೋಲನದಲ್ಲಿ ಭಾರತೀಯ ಹಿತರಕ್ಷಣಾ ವೇದಿಕೆ ಸದಸ್ಯರು ಬೃಹತ್‌ ತ್ರಿವರ್ಣ ಧ್ವಜ ಪ್ರದರ್ಶಿಸಿದರು.
ಪೌರತ್ವ ಕಾಯ್ದೆ ಬೆಂಬಲಿಸಿ ಕೋಲಾರದಲ್ಲಿ ಶನಿವಾರ ನಡೆದ ಜನಾಂದೋಲನದಲ್ಲಿ ಭಾರತೀಯ ಹಿತರಕ್ಷಣಾ ವೇದಿಕೆ ಸದಸ್ಯರು ಬೃಹತ್‌ ತ್ರಿವರ್ಣ ಧ್ವಜ ಪ್ರದರ್ಶಿಸಿದರು.   

ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳು ಭಾರತೀಯ ಹಿತರಕ್ಷಣಾ ವೇದಿಕೆ ಹೆಸರಿನಲ್ಲಿ ಇಲ್ಲಿ ಶನಿವಾರ ನಡೆಸಿದ ಜನಾಂದೋಲನವು ಗೊಂದಲದ ಗೂಡಾಯಿತು.

ಸಂಸದ ಎಸ್‌.ಮುನಿಸ್ವಾಮಿ ಹಾಗೂ ಬಿಜೆಪಿ ಮುಖಂಡರು ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರವಾಸಿ ಮಂದಿರ, ಡೂಂಲೈಟ್‌ ವೃತ್ತ, ಕ್ಲಾಕ್‌ಟವರ್‌ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದವರೆಗೆ ಮೆರವಣಿಗೆ ನಡೆಸಲು ಪೊಲೀಸ್‌ ಇಲಾಖೆಯ ಅನುಮತಿ ಕೋರಿದ್ದರು.

ಆದರೆ, ಪೊಲೀಸ್‌ ಅಧಿಕಾರಿಗಳು ಮೆರವಣಿಗೆಗೆ ಅನುಮತಿ ನಿರಾಕರಿಸಿ ಎಂ.ಜಿ ರಸ್ತೆಯ ಚಂಪಕ್‌ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲು ಅವಕಾಶ ಕೊಟ್ಟಿದ್ದರು. ಆದರೆ, ಬಿಜೆಪಿ ಮುಖಂಡರು ಬಂಗಾರಪೇಟೆ ವೃತ್ತದಿಂದ ಕೆಎಸ್‌ಆರ್‌ಟಿಸಿ ವೃತ್ತದವರೆಗೆ ಮೆರವಣಿಗೆ ನಡೆಸುವುದಾಗಿ ಕರಪತ್ರ ಮುದ್ರಿಸಿ ಶುಕ್ರವಾರವೇ ನಗರದೆಲ್ಲೆಡೆ ಹಂಚಿದ್ದರು.

ADVERTISEMENT

ಬಿಜೆಪಿ ಕಾರ್ಯಕರ್ತರ ಗುಂಪು ಪೊಲೀಸರು ಮೆರವಣಿಗೆ ನಿರ್ಬಂಧಿಸಿರುವ ಸಂಗತಿ ತಿಳಿಯದೆ ಕರಪತ್ರದಲ್ಲಿನ ವಿವರ ನಿಜವೆಂದು ನಂಬಿ ಮೆರವಣಿಗೆ ನಡೆಸಲು ಮುಂದಾಗಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿ ಪ್ರಹಾರ ನಡೆಸಿದರು. ಇದೇ ಸಂದರ್ಭದಲ್ಲಿ ಎಂ.ಜಿ ರಸ್ತೆಯ ಚಂಪಕ್‌ ವೃತ್ತದಲ್ಲಿ ಜನಾಂದೋಲನದ ವೇದಿಕೆ ಕಾರ್ಯಕ್ರಮ ನಡೆಯಿತು.

ವಹಿವಾಟು ಸ್ಥಗಿತ: ಎಂ.ಜಿ ರಸ್ತೆಯ ಚಂಪಕ್‌ ವೃತ್ತವು ಪ್ರಮುಖ ವಾಣಿಜ್ಯ ಸ್ಥಳವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ವ್ಯಾಪಾರಿಗಳು ಇಡೀ ದಿನ ಅಂಗಡಿ ತೆರೆಯಲಿಲ್ಲ. ಮತ್ತೊಂದೆಡೆ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಲಾಕ್‌ಟವರ್‌ನಲ್ಲೂ ಅಂಗಡಿಗಳನ್ನು ಮುಚ್ಚಲಾಗಿತ್ತು. ಹೋಟೆಲ್‌ಗಳನ್ನು ಸಹ ಬಂದ್‌ ಮಾಡಲಾಗಿತ್ತು. ಆಟೊಗಳು ರಸ್ತೆಗೆ ಇಳಿಯಲೇ ಇಲ್ಲ.

ಕ್ಲಾಕ್‌ಟವರ್‌, ಎಂ.ಜಿ ರಸ್ತೆ ಮತ್ತು ಪ್ರವಾಸಿ ಮಂದಿರ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹೀಗಾಗಿ ಈ ಮೂರೂ ಕಡೆ ಸಂಪೂರ್ಣವಾಗಿ ವಾಹನ ಸಂಚಾರ ನಿರ್ಬಂಧಿಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಜನಾಂದೋಲನಕ್ಕೆ ಬಿಜೆಪಿ ಕಾರ್ಯಕರ್ತರನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪೊಲೀಸರು ಕಾರ್ಯಕರ್ತರ ಬಸ್‌ಗಳನ್ನು ನಗರದ ಪ್ರವೇಶ ಭಾಗದಲ್ಲೇ ತಡೆದು ವಾಪಸ್‌ ಕಳುಹಿಸಿದರು.

ಸಂಚಾರ ಬದಲಾವಣೆ: ನಗರದೊಳಗೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಯಿತು. ಮುಳಬಾಗಿಲು ಮತ್ತು ಬೆಂಗಳೂರು ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ವಾಹನಗಳಿಗೆ ನಗರ ಪ್ರವೇಶಕ್ಕೆ ಅವಕಾಶ ನೀಡದೆ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲೇ ಕಳುಹಿಸಲಾಯಿತು.

ಸಂಚಾರ ವ್ಯವಸ್ಥೆಯಲ್ಲಿನ ಬದಲಾವಣೆ ಬಗ್ಗೆ ಮಾಹಿತಿ ಇಲ್ಲದೆ ವಾಹನ ಸವಾರರು ತೊಂದರೆ ಅನುಭವಿಸಿದರು. ಲಾಠಿ ಪ್ರಹಾರ ನಡೆದ ಸ್ಥಳದ ಪಕ್ಕದಲ್ಲೇ ಇರುವ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೂ ಸಮಸ್ಯೆಯಾಯಿತು. ಪೊಲೀಸರು ಸಾರ್ವಜನಿಕರ ವಾಹನಗಳು ಹಾಗೂ ಶಾಲಾ ವಾಹನಗಳನ್ನು ತಡೆದು ಬೇರೆ ರಸ್ತೆಗಳಲ್ಲಿ ಹೋಗುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.