ADVERTISEMENT

ಕೆಜಿಎಫ್‌: ಹೂವಿನ ರಕ್ಷಣೆಗೆ ಮೇಲ್ಚಾವಣಿ

ಬಿಸಿಲಿನ ಝಳಕ್ಕೆ ಕಪ್ಪಾಗದಂತೆ ತಡೆಯಲು ಹೊಸ ವಿಧಾನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 3:57 IST
Last Updated 23 ಫೆಬ್ರುವರಿ 2023, 3:57 IST
ಕೆಜಿಎಫ್ ಸಮೀಪದ ಆಡಂಪಲ್ಲಿ ಬಳಿ ಸೇವಂತಿಗೆ ಹೂವಿನ ತೋಟಕ್ಕೆ ಮೆಷ್‌ ಮೇಲ್ಚಾವಣಿ ಹಾಕಿರುವುದು
ಕೆಜಿಎಫ್ ಸಮೀಪದ ಆಡಂಪಲ್ಲಿ ಬಳಿ ಸೇವಂತಿಗೆ ಹೂವಿನ ತೋಟಕ್ಕೆ ಮೆಷ್‌ ಮೇಲ್ಚಾವಣಿ ಹಾಕಿರುವುದು   

ಕೆಜಿಎಫ್‌: ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ಝಳಕ್ಕೆ ಹೂವುಗಳು ಬಾಡದಿರಲಿ ಎಂಬ ಕಾರಣಕ್ಕೆ ಆಡಂಪಲ್ಲಿಯ ರೈತರೊಬ್ಬರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದ ಸೇವಂತಿಗೆ ಹೂವಿನ ತೋಟಕ್ಕೆ ಮೇಲ್ಚಾವಣಿ ಹಾಕಿದ್ದಾರೆ.

ತಾಲ್ಲೂಕಿನಲ್ಲಿ ಬಿಸಿಲಿನ ಝಳ ಒಂದೇ ಸಮನೇ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ಅರಳಿದ ಹೂವುಗಳು ಮುದುಡುತ್ತಿವೆ. ಇಂಥ ಹೂವುಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇರುವುದಿಲ್ಲ. ಈಗಾಗಲೇ ಸಾವಿರಾರು ರೂಪಾಯಿ ಮೌಲ್ಯದ ಹೂವುಗಳು ಬಾಡಿಹೋಗಿವೆ. ಮುಂದೆ ಹೂ ಕೊಯ್ಯುವ ತನಕ ಬಾಡದಿರಲಿ ಎಂದು ಮೇಲ್ಛಾವಣಿ ಹಾಕಲಾಗುತ್ತಿದೆ ಎನ್ನುತ್ತಾರೆ ರೈತ ಸಂತೋಷ್‌.

ಒಂದು ಎಕರೆಗೆ ಪ್ಲಾಸ್ಟಿಕ್ ಮೇಲ್ಛಾವಣಿಗೆ ಸುಮಾರು ಒಂದು ಲಕ್ಷದಷ್ಟು ವೆಚ್ಚವಾಗುತ್ತದೆ. ಹೂವಿನ ವ್ಯವಸಾಯದ ನಂತರ ಬೇರೆ ಉಪಯೋಗಕ್ಕೆ ಕೂಡ ಅದನ್ನು ಉಪಯೋಗಿಸಿಕೊಳ್ಳಬಹುದು.ಈಗಾ ಗಲೇ ಐದು ಲಕ್ಷ ರೂಪಾಯಿಗಳನ್ನು ಹೂವಿನ ಬೇಸಾಯಕ್ಕೆ ವಿನಿಯೋಗಿಸಿದ್ದೇನೆ. ಮಾರುಕಟ್ಟೆಯಲ್ಲಿ ಕೆಜಿಗೆ 150 ರೂಪಾಯಿಗಿಂತ ಹೆಚ್ಚು ಧಾರಣೆ ಇದ್ದರೆ ಲಾಭ ಬರುತ್ತದೆ. ಹೂವಿನ ಗುಣಮಟ್ಟ ಚೆನ್ನಾಗಿದ್ದರೆ ಖರೀದಿದಾರರು ಮುಂದೆ ಬರುತ್ತಾರೆ. ಮುದುಡಿದರೆ ಹೂವು ಖರೀದಿಸಲು ಗ್ರಾಹಕರು ಮುಂದೆ ಬರುವುದಿಲ್ಲ ಎಂದರು.

ADVERTISEMENT

ಹೂವು ಬಾಡಬಾರದು ಎಂಬ ಕಾರಣಕ್ಕೆ ಹೂವಿನ ಗಿಡಗಳಿಗೆ ಮೇಲ್ಛಾವಣಿ ಹಾಕುವ ವಿಧಾನವನ್ನು ರೈತರು ಕಂಡಕೊಂಡಿರುವ ಹೊಸ ತಂತ್ರ. ಬಿಸಿಲಿನ ಝಳದ ಜೊತೆ ಕ್ರಿಮಿಬಾಧೆಯನ್ನು ಮೆಷ್‌ ಮೇಲ್ಛಾವಣೆಯಿಂದ ತಡೆಗಟ್ಟಬಹುದು. ಜೊತೆಗೆ ಹೂ ತೋಟಕ್ಕೆ ಅತಿಯಾದ ರಾಸಾಯನಿಕ ಮದ್ದು ಸಿಂಪಡಿಸಿದರೆ ಹೂವು ಬೇಗ ಕಪ್ಪಾಗುವ ಸಾಧ್ಯತೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.