ADVERTISEMENT

ಸೈಬರ್‌ ಕೇಂದ್ರಗಳ ಮೇಲೆ ದಾಳಿ: ಪ್ರಕರಣ ದಾಖಲು

ಗೃಹಲಕ್ಷ್ಮಿ ಯೋಜನೆಗೆ ಆಧಾರ್ ಲಿಂಕ್‌: ಸುಳ್ಳು ಮಾಹಿತಿ ಪ್ರಸಾರಕ್ಕೆ ಜಿಲ್ಲಾಡಳಿತ ಕ್ರಮ

​ಪ್ರಜಾವಾಣಿ ವಾರ್ತೆ
Published 26 ಮೇ 2023, 23:36 IST
Last Updated 26 ಮೇ 2023, 23:36 IST
   

ಕೆಜಿಎಫ್‌ (ಕೋಲಾರ): ಸರ್ಕಾರದ ಆದೇಶವಿಲ್ಲದೆ ಇದ್ದರೂ ‘ಗೃಹಲಕ್ಷ್ಮಿ’ ಯೋಜನೆಯಡಿ ಹಣ ಪಡೆಯಲು ಮೇ 31ರೊಳಗೆ ಬಿಪಿಎಲ್ ಪಡಿತರ ಚೀಟಿಗೆ ಆಧಾರ್‌ ಮತ್ತು ಬ್ಯಾಂಕ್ ಖಾತೆ ಜೋಡಣೆಯಾಗಬೇಕು ಎಂದು ಕರಪತ್ರಗಳ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದಡಿ ಮೂರು ಸೈಬರ್ ಕೇಂದ್ರಗಳ ಮಾಲೀಕರ ವಿರುದ್ಧ ರಾಬರ್ಟಸನ್‌ಪೇಟೆ ಠಾಣೆ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ನಗರದ ಸೈಬರ್ ಕೇಂದ್ರಗಳಲ್ಲಿ ‘ಗೃಹಲಕ್ಷ್ಮಿ’ ಯೋಜನೆ ಹೆಸರಲ್ಲಿ ಮಹಿಳೆ ಯರಿಗೆ ವಂಚನೆ ಮಾಡುತ್ತಿರುವ ಬಗ್ಗೆ ‘ಪ್ರಜಾವಾಣಿ‌’ಯಲ್ಲಿ ಶುಕ್ರವಾರ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಬರ್ಟಸನ್‌ಪೇಟೆ 3ನೇ ಕ್ರಾಸ್‌ನ ಜೆಪಿ ನೆಟ್‌ ಕಮ್ಯುನಿಕೇಷನ್‌, ಊರಿಗಾಂಪೇಟೆಯ ಮಿನಿ ಇಬ್ರಾಹಿಂ ರಸ್ತೆಯ ರಾಜಾ ನೆಟ್‌ವರ್ಕ್‌ ಕಮ್ಯುನಿ ಕೇಷನ್‌, ಮೋಹಿನ್‌ ಅಸೋಸಿಯೇಟ್ಸ್‌ ಕೇಂದ್ರಗಳಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ದಾಖಲೆ ಪರಿಶೀಲಿಸಿದರು.

ADVERTISEMENT

‘ಬಿಪಿಎಲ್‌ ಪಡಿತರ ಚೀಟಿಗಳಿಗೆ ಬ್ಯಾಂಕ್ ಖಾತೆ ಮತ್ತು ಆಧಾರ್‌ ಸಂಖ್ಯೆ ಜೋಡಿಸಬೇಕು. ಪಡಿತರ ಚೀಟಿಯಲ್ಲಿ ಮಹಿಳೆಯರನ್ನು ಮುಖ್ಯಸ್ಥರನ್ನಾಗಿ ಮಾಡಬೇಕು’ ಎಂಬ ಜಾಹೀರಾತು ನೀಡಿದ ಸೈಬರ್ ಕೇಂದ್ರದ ಮಾಲೀಕ ರಾದ ಜಯಪ್ರಕಾಶ್, ಮೋಹಿನ್ ಅಸೋಸಿಯೇಟ್ಸ್‌ ಮತ್ತು ರಾಜ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ತಹಶೀಲ್ದಾರ್, ಆಹಾರ ನಿರೀಕ್ಷಕರು ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ್ದರು.

ಬ್ಯಾಂಕ್‌ ಖಾತೆ, ಆಧಾರ್‌ ಜೋಡಣೆ ಮಾಡಿಸಲು ₹250ರಂತೆ ಹಣ ನೀಡುವಂತೆ ಜಾಹೀರಾತು ಪ್ರಕಟಿಸಿ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಇಂಥ ಸೈಬರ್‌ ಕೇಂದ್ರಗಳ ವಿರುದ್ಧ ಕೆಜಿಎಫ್‌ ತಹಶೀಲ್ದಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ಗೃಹಲಕ್ಷ್ಮಿ ಅಥವಾ ಇತರ ಯಾವುದೇ ಹೊಸ ಯೋಜನೆಗಳ ಬಗ್ಗೆ ಸರ್ಕಾರದಿಂದ ‌ಯಾವುದೇ ಮಾರ್ಗಸೂಚಿ ಇದುವರೆಗೂ ಅಧಿಕೃತವಾಗಿ ಆದೇಶವಾಗಿರುವು ದಿಲ್ಲ. ಸಾರ್ವಜನಿಕರು ವದಂತಿ ನಂಬ ಬಾರದು. ಗೃಹಲಕ್ಷ್ಮಿ ಅಥವಾ ಯಾವುದೇ ಯೋಜನೆಗಳ ಬಗ್ಗೆ ಮುಂಬರುವ ದಿನಗಳಲ್ಲಿ ನೀಡುವ ಮಾರ್ಗಸೂಚಿಯ ಅನ್ವಯ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಮಿನಲ್ ಪ್ರಕರಣದ ಎಚ್ಚರಿಕೆ

‘ಗೃಹಲಕ್ಷ್ಮಿ ಯೋಜನೆಯಡಿ ₹ 250ವಸೂಲಿ ಮಾಡುತ್ತಿರುವ ಸೈಬರ್ ಕೇಂದ್ರಗಳ  ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು. ಸಾರ್ವಜನಿಕರನ್ನು ವಂಚಿಸಲು ಹೀಗೆ ಮಾಡಲಾಗುತ್ತಿದೆ. ಇಲಾಖೆಯೇ
ಪಡಿತರ ಚೀಟಿಯಲ್ಲಿ ಮನೆಯ ಹಿರಿಯ ಸದಸ್ಯೆಯನ್ನೇ ಕುಟುಂಬದ ಮುಖ್ಯಸ್ಥೆಯಾಗಿ ಆಯ್ಕೆ ಮಾಡಲಾಗಿದೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ
ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.