ಕೋಲಾರ: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ಸಿದ್ಧತೆ ಸಂಬಂಧ ಸಭೆ ನಡೆಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದ ಮೇಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿದಂತೆ 105 ಮಂದಿ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ತೂರು ಪ್ರಕಾಶ್ ಹಾಗೂ ಬೆಂಬಲಿಗರು ಪೂರ್ವಾನುಮತಿ ಪಡೆಯದೆ ನಗರದ ಎ.ಎಫ್ ಸಭಾಂಗಣದಲ್ಲಿ ಸೋಮವಾರ (ಆ.2) ನೂರಾರು ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಚುನಾವಣೆ ಸಂಬಂಧ ಸಭೆ ನಡೆಸಿದ್ದರು. ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಕಾರ್ಯಕರ್ತರು ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ್ ಧರಿಸದೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದರು.
ಈ ಸಂಬಂಧ ಕೋಲಾರ ಕಸಬಾ ಕಂದಾಯ ನಿರೀಕ್ಷಕ ವಿಜಯ್‌ದೇವ್ ಸ್ಥಳ ಪರಿಶೀಲನೆ ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಪೊಲೀಸರು ವರ್ತೂರು ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಕೋಲಾರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ದರಖಾಸ್ತು ಸಮಿತಿ ಮಾಜಿ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ಎ.ಎಫ್ ಸಭಾಂಗಣದ ಮಾಲೀಕರು ಹಾಗೂ 100 ಮಂದಿ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ಕಾಯಿಲೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.