ADVERTISEMENT

ಗೋಡಂಬಿ ಬೆಳೆ ಲಾಭದಾಯಕ

ಹೊಗಳಗೆರೆಯಲ್ಲಿ ಜಿಲ್ಲಾಮಟ್ಟದ ಗೇರು ಬೆಳೆಯ ವಿಚಾರ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 7:21 IST
Last Updated 8 ಜನವರಿ 2021, 7:21 IST
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಗೇರು ಬೆಳೆಯ ವಿಚಾರ ಗೋಷ್ಠಿಯನ್ನು ಕೊಚ್ಚಿನ್‌ ಗೇರು ಮತ್ತು ಕೊಕೊ ನಿರ್ದೇಶನಾಲಯದ ನಿರ್ದೇಶಕ ಡಾ.ಎನ್. ವೆಂಕಟೇಶ್ ಹುಬ್ಬಳ್ಳಿ ಉದ್ಘಾಟಿಸಿದರು
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಗೇರು ಬೆಳೆಯ ವಿಚಾರ ಗೋಷ್ಠಿಯನ್ನು ಕೊಚ್ಚಿನ್‌ ಗೇರು ಮತ್ತು ಕೊಕೊ ನಿರ್ದೇಶನಾಲಯದ ನಿರ್ದೇಶಕ ಡಾ.ಎನ್. ವೆಂಕಟೇಶ್ ಹುಬ್ಬಳ್ಳಿ ಉದ್ಘಾಟಿಸಿದರು   

ಶ್ರೀನಿವಾಸಪುರ: ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಯ ರೈತರು ಮಾವಿಗೆ ಪರ್ಯಾಯವಾಗಿ ಗೋಡಂಬಿ ಬೆಳೆಯುವುದರ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಕೊಚ್ಚಿನ್‌ನ ಗೇರು ಮತ್ತು ಕೊಕೊ ನಿರ್ದೇಶನಾಲಯದ ನಿರ್ದೇಶಕ ಡಾ.ಎನ್. ವೆಂಕಟೇಶ್ ಹುಬ್ಬಳ್ಳಿ ಸಲಹೆ ನೀಡಿದರು.

ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಚ್ಚಿನ್‌ನ ಗೇರು ಮತ್ತು ಕೊಕೊ ನಿರ್ದೇಶನಾಲಯ, ಸ್ಥಳೀಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಗುರುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಗೇರು ಬೆಳೆಯ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಬಿಳಿ ಬಂಗಾರ ಎಂದು ಕರೆಯಲ್ಪಡುವ ಗೋಡಂಬಿ ಲಾಭದಾಯಕ ಬೆಳೆಯಾಗಿದೆ ಎಂದು ಹೇಳಿದರು.

ADVERTISEMENT

ದೇಶದ 20 ರಾಜ್ಯಗಳಲ್ಲಿ 11.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತಿದೆ. ವಾರ್ಷಿಕ 7.50 ಲಕ್ಷ ಮೆಟ್ರಿಕ್ ಟನ್ ಗೋಡಂಬಿ ಉತ್ಪಾದಿಸಲಾಗುತ್ತಿದೆ. ಆದರೆ, ದೇಶದಲ್ಲಿ 16 ಲಕ್ಷ ಮೆಟ್ರಿಕ್ ಟನ್ ಗೋಡಂಬಿಗೆ ಬೇಡಿಕೆ ಇದೆ. ಕೊರತೆ ಇರುವ ಪ್ರಮಾಣದ ಗೋಡಂಬಿಯನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ₹ 8,800 ಕೋಟಿ ಮೌಲ್ಯದ ಗೋಡಂಬಿಯನ್ನು ಹೊರದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಗೋಡಂಬಿ ಬೆಳೆ ಮಳೆ ಹಾಗೂ ಅಂತರ್ಜಲ ಕೊರತೆ ಎದುರಿಸುತ್ತಿರುವ ಬಯಲುಸೀಮೆಗೆ ವರದಾನವಾಗಿದೆ. ತೋಟವನ್ನು ಸರಿಯಾಗಿ ನೋಡಿಕೊಂಡಲ್ಲಿ ಹೆಕ್ಟೇರ್ ಒಂದಕ್ಕೆ ₹ 4 ರಿಂದ 5 ಲಕ್ಷ ಆದಾಯಗಳಿಸಬಹುದಾಗಿದೆ. ಗೋಡಂಬಿ ಬೆಳೆಯನ್ನು 3 ವರ್ಷ ಪಾಲಿಸಿದರೆ ಅದು 30 ವರ್ಷ ರೈತನನ್ನು ಪಾಲಿಸುತ್ತದೆ ಎಂದು ಹೇಳಿದರು.

ಲಾಲ್‌ಬಾಗ್‌ನ ಜಂಟಿ ತೋಟಗಾರಿಕಾ ನಿರ್ದೇಶಕ ಡಾ.ಬಿ.ಎನ್. ಪ್ರಸಾದ್ ಮಾತನಾಡಿ, ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಗೊಂಡಂಬಿ ಬೆಳೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ಗೋಡಂಬಿ ಬೆಳೆಯಲು ಹೆಕ್ಟೇರ್ ಒಂದಕ್ಕೆ ₹ 75 ಸಾವಿರ ಅನುದಾನ ಸಿಗುತ್ತದೆ. ಈ ಹಣವನ್ನು ಹಂತ ಹಂತವಾಗಿ ವಾರ್ಷಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿಷ್ಣುವರ್ಧನ, ಡಾ.ಆರ್.ಕೆ. ರಾಮಚಂದ್ರ, ಬಿ.ಎನ್. ರಾಜೇಂದ್ರ, ಡಾ.ಎನ್. ಅಶ್ವತ್ಥನಾರಾಯಣರೆಡ್ಡಿ, ಜಿ. ಆಂಜನೇಯರೆಡ್ಡಿ, ಎಂ. ರಮೇಶ್, ಕೆ. ಪೊಟ್ಟಪ್ಪ, ಟಿ. ಸುಬ್ರಮಣ್ಯಂ ಉಪನ್ಯಾಸ ನೀಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ಬೈರೆಡ್ಡಿ, ಎಂ. ಶ್ರೀನಿವಾಸ್, ಪ್ರಗತಿಪರ ರೈತರಾದ ಎನ್. ರಾಜಣ್ಣ, ನಾರಾಯಣಸ್ವಾಮಿ, ವೈ.ವಿ. ಅಮರನಾಥ್ ಇದ್ದರು.

ಸ್ಥಳೀಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಆರ್.ಕೆ.ರಾಮಚಂದ್ರ ಅವರ ನೇತೃತ್ವದಲ್ಲಿ ರೈತರಿಗೆ ಗೋಡಂಬಿ ಸಸಿ ವಿತರಿಸಲಾಯಿತು. ಗೋಡಂಬಿ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.