ಮುಳಬಾಗಿಲು: ಸರ್ಕಾರ ಒಕ್ಕಲಿಗ ಜಾತಿಯ ಗಣತಿಯನ್ನು ಸರಿಯಾಗಿ ಮಾಡಿಲ್ಲ, ಸಮುದಾಯಕ್ಕೆ ಮೋಸ ಮಾಡಿದೆ. ಗಣತಿಯನ್ನು ಮತ್ತೊಮ್ಮೆ ಮಾಡಬೇಕು ಎಂದು ತಾಲ್ಲೂಕು ಒಕ್ಕಲಿಗ ಮುಖಂಡರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗ ಸಮುದಾಯದ ಮುಖಂಡರು ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯಗಳಲ್ಲಿ ಒಕ್ಕಲಿಗರು ಮುಂದಿದ್ದಾರೆ. ಆದರೆ, ಮನೆಮನೆಗೆ ಬಂದು ಗಣತಿಯನ್ನೇ ಮಾಡಿಲ್ಲ. ಗಣತಿಯನ್ನು ಯಾವಾಗ ಯಾರು ಮಾಡಿದರು ಎನ್ನುವುದೇ ಯಾರಿಗೂ ಗೊತ್ತಿಲ್ಲ, ಈಗ ನೀಡಲಾಗಿರುವ ಒಕ್ಕಲಿಗರ ಲೆಕ್ಕವನ್ನು ಒಪ್ಪಲಾಗದು ಎಂದು ತಿಳಿಸಿದರು.
2011ರ ಜನಸಂಖ್ಯೆ ಸರ್ವೆ ಬಿಟ್ಟರೆ ಉಳಿದಂತೆ ತಾಲ್ಲೂಕಿನಲ್ಲಿ ಯಾವುದೇ ಸರ್ವೆ ಆಗಿಲ್ಲ. ಯಾವ ಲೆಕ್ಕಾಚಾರದಲ್ಲಿ ಒಕ್ಕಲಿಗ ಜಾತಿ ಗಣತಿಯನ್ನು ಮಾಡಿ ಅಧಿಕಾರಿಗಳು ಸರ್ಕಾರಕ್ಕೆ ಒಪ್ಪಿಸಿದರು ಎನ್ನುವುದನ್ನು ತಿಳಿಸಲಿ ಎಂದು ದೊಮ್ಮಸಂದ್ರ ಡಿ.ವಿ.ತಮ್ಮಣ್ಣ ಸವಾಲು ಹಾಕಿದರು.
ಯಾವುದೇ ಅಧಿಕಾರಿ ತಾಲ್ಲೂಕಿನ ಯಾವ ಗ್ರಾಮ ಅಥವಾ ನಗರ ಪ್ರದೇಶಗಳಲ್ಲಿ ಮನೆಗಳ ಬಳಿಗೆ ಹೊಗಿಲ್ಲ. ಯಾವ ಜನಾಂಗವನ್ನು ಸಂಪರ್ಕಿಸಿಲ್ಲ. ಹೀಗಿರುವಾಗ ಗಣತಿ ಕಾರ್ಯವನ್ನು ಹೇಗೆ ಮಾಡಿದರು? ಯಾವ ಆಧಾರದ ಮೇಲೆ ಜಾತಿವಾರು ಲೆಕ್ಕಾಚಾರ ಹಾಕಿದರು? ಸರ್ಕಾರ ಒಕ್ಕಲಿಗರ ಗಣತಿಯನ್ನು ಬಿಡುಗಡೆ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶ ಕಂಡುಬರುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೀಲಾಗಣಿ ಮಂಜುನಾಥ ಸ್ವಾಮಿ ಅಸಮಾಧಾನ ಹೊರಹಾಕಿದರು.
ನಗವಾರ ಎನ್.ಆರ್.ಮಂಜು ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದುಕೊಂಡೇ ಒಕ್ಕಲಿಗ ಜನಾಂಗಕ್ಕೆ ಮೋಸ ಆಗುತ್ತಿದ್ದರೂ ಗಣತಿಯನ್ನು ಒಪ್ಪಿಕೊಂಡಿರುವುದು ಖಂಡನೀಯ. ಇದು ಒಕ್ಕಲಿಗ ಜನನಾಯಕರಿಂದಲೇ ಒಕ್ಕಲಿಗ ಜನಾಂಗಕ್ಕೆ ಮಾಡಿದ ಮೋಸ ಎಂದರು.
ಕೀಲಾಗಾಣಿ ಮಂಜುನಾಥ ಸ್ವಾಮಿ, ತಮ್ಮಣ್ಣ, ಟೊಮೆಟೊ ಮಂಡಿ ಎನ್.ಆರ್.ಎಸ್.ಮಂಜುನಾಥ್, ಶ್ರೀನಿವಾಸ ಗೌಡ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.