
ಬಂಗಾರಪೇಟೆ: ತಾಲ್ಲೂಕಿನ ಬೆಂಗನೂರು ಗ್ರಾಮದ ಸ್ಮಶಾನ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಮತ್ತು ದಲಿತ ಸಮಾಜ ಸೇನೆ ಕಾರ್ಯಕರ್ತರು ಸ್ಮಶಾನದ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ದಲಿತ ಸಮಾಜ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡಿ, ತಾಲ್ಲೂಕಿನ ಬೆಂಗನೂರಿನಲ್ಲಿ ಸ್ಮಶಾನಕ್ಕೆಂದು 4.3 ಎಕರೆ ಮೀಸಲಿದ್ದು, ಅದನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ತಾಲ್ಲೂಕು ಆಡಳಿತ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದರು.
ಈ ಹಿಂದೆಯೇ ಗ್ರಾಮಸ್ಥರು ಸ್ಮಶಾನ ಒತ್ತುವರಿಯಾಗಿದ್ದು, ಶವ ಸಂಸ್ಕಾರಕ್ಕೆ ಜಾಗವಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ತಾ.ಪಂ. ಅಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಗೆ ಕ್ರಮಕ್ಕೆ ಸೂಚಿಸಲಾಗಿತ್ತು. ಆದರೆ, ತಾಲ್ಲೂಕು ಆಡಳಿತ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಕ್ಕೆ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಸ್ಮಶಾನದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದ ಗಿಡಗಂಟಿ ಬೆಳದಿದೆ ಅದನ್ನು ತೆರವುಗೊಳಿಸಬೇಕು ಎಂದರು.
ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ್ ಪ್ರಭಾಕರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ತಾಲ್ಲೂಕು ಆಡಳಿತ ವಾರದೊಳಗೆ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಹಾಗಾಗಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.
ಈ ವೇಳೆ ಗಂಗಾಧರ್, ಅಯ್ಯಪ್ಪ, ಮಂಜುನಾಥ್, ಕರ್ಣ, ರವಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.