ADVERTISEMENT

ಇ.ಡಿ ದುರ್ಬಳಕೆ: ಶಾಸಕ ಆರೋಪ

ಎಸ್ಎಚ್‌ಡಿಪಿಯಡಿ ₹ 8 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:19 IST
Last Updated 7 ಜುಲೈ 2022, 4:19 IST
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಬಳಿ ಎಸ್ಎಚ್‌ಡಿಪಿ ಯೋಜನೆಯಡಿ ಏರ್ಪಡಿಸಿದ್ದ ಕಾಮಸಮುದ್ರ-ಬಂಗಾರಪೇಟೆ ರಸ್ತೆ ಅಭಿವೃದ್ಧಿ, ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿದರು
ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಬಳಿ ಎಸ್ಎಚ್‌ಡಿಪಿ ಯೋಜನೆಯಡಿ ಏರ್ಪಡಿಸಿದ್ದ ಕಾಮಸಮುದ್ರ-ಬಂಗಾರಪೇಟೆ ರಸ್ತೆ ಅಭಿವೃದ್ಧಿ, ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿದರು   

ಬಂಗಾರಪೇಟೆ: ‘ಕೇಂದ್ರ ಸರ್ಕಾರ ಇ.ಡಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ರಾಜಕಾರಣಿಗಳಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಅಚ್ಛೇ ದಿನಗಳು ಬರಲಿವೆ ಎಂದು ಹೇಳಿ ಜನರ ಬಾಯಿಗೆ ಮಣ್ಣು ಹಾಕಲಾಗುತ್ತಿದೆ’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ಕಾಮಸಮುದ್ರ ಗ್ರಾಮದಿಂದ ಬಂಗಾರಪೇಟೆ ಪಟ್ಟಣದವರಿಗೆ ಎಸ್ಎಚ್‌ಡಿಪಿ ಯೋಜನೆಯಡಿ ₹ 8 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನೋಟ್ ಬ್ಯಾನ್‌ನಿಂದ ಹಿಡಿದು ಇಲ್ಲಿಯತನಕ ಮೋದಿ ಅವರು ಒಂದೆಲ್ಲಾ ಒಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಜನವಿರೋಧಿ ಧೋರಣೆಯಿಂದ ಈಗ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮುಂದಿನ ದಿನಗಳಲ್ಲಿ ನಾವು ಉಸಿರಾಡುವ ಗಾಳಿಗೂ ತೆರಿಗೆ ವಿಧಿಸುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ ಎಂದರು.

ADVERTISEMENT

ಹಿಂದಿನ ಸರ್ಕಾರಗಳು ಆಧಾರ ಇಲ್ಲದೆ ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಕಾರ್ಮಿಕರಿಗೆ ಸಾಲ ನೀಡುತ್ತಿರಲಿಲ್ಲ. ಸಾಲ ಮತ್ತು ಬಡ್ಡಿ ತೀರಿಸಲು ತಡವಾದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಮ್ಮ ಒತ್ತಾಯದ ಮೇರೆಗೆ ಡಿಸಿಸಿ ಬ್ಯಾಂಕ್ ಮೂಲಕ ಬಡ್ಡಿರಹಿತ ಸಾಲ ಜಾರಿ ಮಾಡಿದರು ಎಂದು ಅವರು
ಹೇಳಿದರು.

ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಇದುವರೆಗೂ ₹ 1,200 ಕೋಟಿ ಬಡ್ಡಿರಹಿತ ಸಾಲ ನೀಡಲಾಗಿದೆ. ಮುಂದಿನ ಅವಧಿಗೆ ಮತ್ತೊಮ್ಮೆ ಶಾಸಕರಾದರೆ ಪ್ರತಿಯೊಂದು ಸಂಘಕ್ಕೂ ₹ 10 ಲಕ್ಷ ಸಾಲ ನೀಡಲಾಗುವುದು ಎಂದರು.

ಸಾಲ ವಿತರಣೆ: ತೊಪ್ಪನಹಳ್ಳಿಯಲ್ಲಿ ಆಯೋಜಿಸಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳು, ರೈತರಿಗೆ ಕೆಸಿಸಿ ಸಾಲ ವಿತರಿಸಿದರು. ಕಾಮಸಮುದ್ರ ಗ್ರಾಮದ 40 ಸಂಘಗಳು, ಬೋಡಗುರ್ಕಿಯ 17 ಸಂಘಗಳು, ತೊಪ್ಪನಹಳ್ಳಿ 16 ಸಂಘಗಳಿಗೆ ಸಾಲ ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ನೈಸ್ ಶಾಲೆಯ ರಘುನಾಥ, ತೊಪ್ಪನಹಳ್ಳಿ ಗ್ರಾಮ ಪಂಚಾಯಿತಿಯ ಲಕ್ಷ್ಮಿನಾರಾಯಣ ಪ್ರಸಾದ್, ಕೆ.ಬಿ. ನಾಗರಾಜು, ರಾಮೇಗೌಡ, ಆದಿನಾರಾಯಣ, ಮಹಾದೇವ, ಶ್ರೀನಿವಾಸ್, ಎಚ್.ಕೆ. ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ಗೋವಿಂದ, ಶಫಿ, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.