ADVERTISEMENT

ಕ್ವಾರಂಟೈನ್‌ ಕೇಂದ್ರಕ್ಕೆ ಸಿಇಒ ಭೇಟಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಿಬ್ಬಂದಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 14:46 IST
Last Updated 11 ಮೇ 2020, 14:46 IST
ಸಿಇಒ ಎಚ್‌.ವಿ.ದರ್ಶನ್‌ ಹಾಗೂ ಉಪ ವಿಭಾಗಾಧಿಕಾರಿ ಸಿ.ಸೋಮಶೇಖರ್ ಅವರು ಕೋಲಾರ ತಾಲ್ಲೂಕಿನ ಮಂಗಸಂದ್ರದಲ್ಲಿನ ಕ್ವಾರಂಟೈನ್‌ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಇಒ ಎಚ್‌.ವಿ.ದರ್ಶನ್‌ ಹಾಗೂ ಉಪ ವಿಭಾಗಾಧಿಕಾರಿ ಸಿ.ಸೋಮಶೇಖರ್ ಅವರು ಕೋಲಾರ ತಾಲ್ಲೂಕಿನ ಮಂಗಸಂದ್ರದಲ್ಲಿನ ಕ್ವಾರಂಟೈನ್‌ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಕೋಲಾರ: ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿರುವ (ಕ್ವಾರಂಟೈನ್‌) ತಾಲ್ಲೂಕಿನ ಮಂಗಸಂದ್ರದ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿಲಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ವಿ.ದರ್ಶನ್‌ ಸೋಮವಾರ ಪರಿಶೀಲನೆ ನಡೆಸಿದರು.

ಕ್ವಾರಂಟೈನ್‌ ಕೇಂದ್ರದಲ್ಲಿನ ಮೂಲಸೌಕರ್ಯ ಪರಿಶೀಲಿಸಿದ ಸಿಇಒ ಅಲ್ಲಿನ ಸಿಬ್ಬಂದಿಗೆ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಅಲ್ಲದೇ, ಆರೋಗ್ಯ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

‘ಆಂಧ್ರಪ್ರದೇಶದ ವಿ.ಕೋಟ ಬಳಿಯ ಪಟ್ಟರಪಲ್ಲಿ ಗ್ರಾಮದ ಕೊರೊನಾ ಸೋಂಕಿತ ವ್ಯಕ್ತಿಯು ಏ.23ರಂದು ಕೋಲಾರ ಎಂಪಿಎಂಸಿಗೆ ಬಂದು ಹೋಗಿದ್ದರು. ಎಪಿಎಂಸಿಯಲ್ಲಿನ ಹಲವು ಮಂಡಿ ಮಾಲೀಕರು, ತರಕಾರಿ ವ್ಯಾಪಾರಿಗಳು, ಹೋಟೆಲ್‌ ಸಿಬ್ಬಂದಿ ಸೇರಿದಂತೆ ಒಟ್ಟಾರೆ 25 ಮಂದಿ ಆ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವುದು ಗೊತ್ತಾಗಿದೆ. ಆ 25 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘25 ಮಂದಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲೇಬೇಕು. 12ನೇ ದಿನಕ್ಕೆ ಇವರೆಲ್ಲರಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. ಆಗ ಇವರಿಗೆ ಕೊರೊನಾ ಸೋಂಕು ಇಲ್ಲವೆಂದು ದೃಢಪಟ್ಟರೆ ಮಾತ್ರ ಕ್ವಾರಂಟೈನ್‌ ಕೇಂದ್ರದಿಂದ ಮನೆಗಳಿಗೆ ಕಳುಹಿಸಲಾಗುತ್ತದೆ. ಇವರಿಗೆ ಆಹಾರ, ನೀರು ಸೇರಿದಂತೆ ಮೂಲ ಸೌಕರ್ಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಸೂಕ್ತ ಸ್ಥಳ: ‘ವಿ.ವಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿಲಯವು ನಗರದಿಂದ ಹೊರಗಿದ್ದು, ಕ್ವಾರಂಟೈನ್‌ಗೆ ಸೂಕ್ತ ಸ್ಥಳವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿನಿತ್ಯ ಇಲ್ಲಿಗೆ ಬಂದು ಆರೋಗ್ಯ ತಪಾಸಣೆ ಮಾಡುತ್ತಾರೆ. ಆರೋಗ್ಯ ಸಿಬ್ಬಂದಿಗೆ ಸುರಕ್ಷತಾ ಸಲಕರಣೆಗಳ ಕಿಟ್‌ ಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಸೋಂಕಿನ ತಡೆಗೆ ಪ್ರತಿಯೊಬ್ಬರು ಸರ್ಕಾರದ ಆದೇಶ ಕಡ್ಡಾಯವಾಗಿ ಪಾಲಿಸಬೇಕು. ಕ್ವಾರಂಟೈನ್‌ನಲ್ಲಿರುವ ಪ್ರತಿಯೊಬ್ಬರನ್ನೂ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಇವರು ಕ್ವಾರಂಟೈನ್ ಅವಧಿ ಮುಗಿಯುವವರೆಗೂ ವೈದ್ಯಕೀಯ ಸಿಬ್ಬಂದಿ ಸಲಹೆ ಸೂಚನೆ ಪಾಲಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕಿನ ನರಸಾಪುರದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ತೆರೆದಿರುವ ಕ್ವಾರಂಟೈನ್‌ ಕೇಂದ್ರ, ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ರಾಮಸಂದ್ರ ಚೆಕ್‌ಪೋಸ್ಟ್ ಮತ್ತು ನಂಗಲಿ ಚೆಕ್‌ಪೋಸ್ಟ್‌ಗೆ ಸಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ ವಿಭಾಗಾಧಿಕಾರಿ ಸಿ. ಸೋಮಶೇಖರ್, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಪಿಡಿಒ ಅನುರಾಧ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.