ADVERTISEMENT

ಚಂಗಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 15:08 IST
Last Updated 8 ಫೆಬ್ರುವರಿ 2021, 15:08 IST
ಕೆ.ಎಸ್.ಚಂಗಪ್ಪ
ಕೆ.ಎಸ್.ಚಂಗಪ್ಪ   

ಕೋಲಾರ: ಜಿಲ್ಲೆಯ ಹೆಸರಾಂತ ಭಜನೆ ತತ್ವಪದ ಕಲಾವಿದ ಕೆ.ಎಸ್.ಚಂಗಪ್ಪ ಅವರು 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಜನೆಯು ದೈವಾರಾಧನೆಯ ಕಲಾ ಪ್ರಕಾರ ಹಾಗೂ ದೇವಾಲಯಗಳಲ್ಲಿ ನಿತ್ಯ ಮಾರ್ದನಿಸುವ ಸಂಗೀತ ಸುಧೆ. ಹಳ್ಳಿಗಾಡಿನ ಸಂಗೀತಗಾರರನ್ನು ರೂಪಿಸುವ ಈ ಕಲಾ ಪ್ರಕಾರ ಮೈಗೂಡಿಸಿಕೊಂಡಿರುವ ಚಂಗಪ್ಪ ಅವರು ಹರಿಕಥೆ, ಭಜನೆ ತತ್ವಪದ, ದೇವರನಾಮಗಳ ಗಾಯನದಲ್ಲಿ ನಿಷ್ಣಾತರು.

ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ 1957ರಲ್ಲಿ ಜನಿಸಿದ ಇವರು ಎಸ್ಸೆಸ್ಸೆಲ್ಸಿ ಓದಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಮಾಲೂರು ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ADVERTISEMENT

ತವರೂರಿನ ದೇವಾಲಯಗಳಲ್ಲಿ ನವಗ್ರಹ, ನಾಗರಕಲ್ಲು ಪ್ರತಿಷ್ಠಾಪನೆ ವೇಳೆ ಹರಿನಾಮ ಸಂಕೀರ್ತನೆ, ಭಜನೆ ತತ್ವಪದ ಗಾಯನದ ಮೂಲಕ ಚಂಗಪ್ಪ ಸ್ಥಳೀಯವಾಗಿ ಮನೆ ಮಾತಾಗಿದ್ದಾರೆ. ಶ್ರೀ ವೇಣುಗೋಪಾಲ ಸ್ವಾಮಿ ಕನ್ನಡ ಕಲಾ ಭಜನೆ ಸಂಘ ಸ್ಥಾಪಿಸಿರುವ ಇವರು ನೂರಾರು ಮಂದಿಗೆ ತತ್ವಪದ ಗಾಯನ ಕಲಿಸುತ್ತಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರುವ ಇವರು ಹರಿನಾಮ ಸಂಕೀರ್ತನೆ ಹಾಗೂ ಹರಿಕಥೆಯಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಸಾವಿರಾರು ಕಾರ್ಯಕ್ರಮಗಳ ಮೂಲಕ ಕಲಾ ಸೇವೆ ಮುಂದುವರಿಸಿರುವ ಇವರು ಹೊಸ ಪೀಳಿಗೆಗೆ ಕಲಾ ತರಬೇತಿ ನೀಡುವ ಗುರುವಾಗಿದ್ದಾರೆ.

ಕಾಲಜ್ಞಾನಿ ಕೈವಾರ ತಾತಯ್ಯರ ತತ್ವಪದಗಳ ಗಾಯನದಲ್ಲಿ ಐದೂವರೆ ದಶಕದಿಂದ ತೊಡಗಿಸಿಕೊಂಡಿರುವ ಇವರು ಜನಮನ್ನಣೆ ಪಡೆದಿದ್ದಾರೆ. 80ರ ಇಳಿ ವಯಸ್ಸಿನಲ್ಲೂ ಹಾಡುಗಾರಿಕೆ ಮೂಲಕ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಾನ್‌ ಕಲಾ ಚೇತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.