ADVERTISEMENT

ವೈದ್ಯಕೀಯ ವರದಿಯ ಸತ್ಯಾಸತ್ಯತೆ ಪರಿಶೀಲಿಸಿ: ಎನ್‌.ಮುನಿರತ್ನ

ಹೊರ ರಾಜ್ಯದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ: ಉಸ್ತುವಾರಿ ಸಚಿವ ಮುನಿರತ್ನ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 15:58 IST
Last Updated 7 ಆಗಸ್ಟ್ 2021, 15:58 IST
ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಕೋವಿಡ್- 3ನೇ ಅಲೆ ನಿರ್ವಹಣೆ ಸಂಬಂಧ ಕೋಲಾರದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದರು
ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಕೋವಿಡ್- 3ನೇ ಅಲೆ ನಿರ್ವಹಣೆ ಸಂಬಂಧ ಕೋಲಾರದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದರು   

ಕೋಲಾರ: ‘ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿರಬೇಕು ಮತ್ತು ಅವರಿಗೆ ಕೊರೊನಾ ಸೋಂಕು ಇಲ್ಲವೆಂದು ವೈದ್ಯಕೀಯ ವರದಿಯಿದ್ದರೆ ಮಾತ್ರ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ 3ನೇ ಅಲೆ ನಿರ್ವಹಣೆ ಸಂಬಂಧ ಇಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ‘ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಬೇಕು. ಜಿಲ್ಲೆಯ ಗಡಿ ಭಾಗದಲ್ಲೇ ಅವರ ಕೋವಿಡ್‌ ಸಂಬಂಧಿತ ವೈದ್ಯಕೀಯ ವರದಿಯ ಪ್ರತಿ ಪಡೆದು ಸತ್ಯಾಸತ್ಯತೆ ಪರಿಶೀಲಿಸಬೇಕು’ ಎಂದರು.

‘ಹೊರ ರಾಜ್ಯಗಳಿಂದ ಬಂದವರು ತಮಗೆ ಕೊರೊನಾ ಸೋಂಕು ಇಲ್ಲವೆಂದು ನಕಲಿ ವರದಿ ಪಡೆದು ಬಂದಿದ್ದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ. ಜತೆಗೆ ನಕಲಿ ವೈದ್ಯಕೀಯ ವರದಿ ನೀಡಿದವರ ವಿರುದ್ಧವೂ ಶಿಸ್ತುಕ್ರಮ ಜರುಗಿಸಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದರು.

ADVERTISEMENT

‘ಕೋವಿಡ್ 3ನೇ ಅಲೆ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಸೋಂಕು ತಗುಲುವ ಆತಂಕವಿದ್ದು, ಎಲ್ಲರೂ ಒಟ್ಟಾಗಿ ಕೋವಿಡ್‌ ವಿರುದ್ಧ ಹೋರಾಡಬೇಕಿದೆ. ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಉತ್ತಮ ಸೌಕರ್ಯಗಳೊಂದಿಗೆ ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡಬೇಕು. ವಿಶೇಷವಾಗಿ ಸೋಂಕಿತ ಮಕ್ಕಳ ಚಿಕಿತ್ಸೆಗೆ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಿ. ಸೋಂಕಿತ ವಯಸ್ಕರಿಗೆ ಬಳಸುವ ವೆಂಟಿಲೇಟರ್‌ಗಳನ್ನು ಮಕ್ಕಳಿಗೆ ಬಳಸಲು ಸಾಧ್ಯವಿಲ್ಲ. ಮಕ್ಕಳಿಗೆ ಪ್ರತ್ಯೇಕವಾಗಿ ವೆಂಟಿಲೇಟರ್‌ಗಳನ್ನು ತರಿಸಿ. ಆಸ್ಪತ್ರೆಗಳಲ್ಲಿ ಕನಿಷ್ಠ 100 ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಮೀಸಲಿಡಬೇಕು’ ಎಂದು ತಿಳಿಸಿದರು.

‘ಮಕ್ಕಳಿಗೆ ಸೋಂಕು ತಗುಲಿದರೆ ನೀಡಬೇಕಾದ ಚಿಕಿತ್ಸೆ ಬಗ್ಗೆ ಅಧ್ಯಯನ ನಡೆಸಿ, ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ. ವೈದ್ಯಕೀಯ ಆಮ್ಲಜನಕದ ಕೊರತೆಯಾಗದಂತೆ ಎಚ್ಚರ ವಹಿಸಿ. ಪ್ರತಿ ಜೀವವೂ ಅಮೂಲ್ಯ. ಪ್ರತಿಯೊಬ್ಬರ ಜೀವ ಉಳಿಸಿ ಮಕ್ಕಳ ಭವಿಷ್ಯ ಕಾಪಾಡಬೇಕು’ ಎಂದು ಕಿವಿಮಾತು ಹೇಳಿದರು.

2ನೇ ಸ್ಥಾನದಲ್ಲಿದೆ: ‘ಜಿಲ್ಲೆಯಲ್ಲಿ ಕೋವಿಡ್ ಮೊದಲ ಮತ್ತು 2ನೇ ಅಲೆ ಸಂದರ್ಭದಲ್ಲಿ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ನೀಡಿರುವ ಜಿಲ್ಲೆಗಳ ಪೈಕಿ ಕೋಲಾರ 2ನೇ ಸ್ಥಾನದಲ್ಲಿದೆ. 3ನೇ ಅಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

2,729 ಹಾಸಿಗೆ: ‘ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿನ 253 ಸಕ್ರಿಯ ಪ್ರಕರಣಗಳಿವೆ. ಸೋಂಕು ಹರಡುವಿಕೆ ಪ್ರಮಾಣ ಶೇ 1.30ರಷ್ಟಿದೆ. 2,729 ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ, ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ವಿವರಿಸಿದರು.

‘36 ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ. ಕೋವಿಡ್ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲಾಗುತ್ತಿದೆ. ಕೊರೊನಾ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ ನೀಡಲಾಗಿದೆ. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಮಕ್ಕಳ ಆರೈಕೆ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಚ್.ನಾಗೇಶ್, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು, ಕೆಜಿಎಫ್‌ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್ ಮೀನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.