ADVERTISEMENT

ಕೋಲಾರ: ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ 6 ಸಾವಿರ ಕೋಳಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 9:35 IST
Last Updated 27 ಆಗಸ್ಟ್ 2022, 9:35 IST
ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದ ಜಮೀನಿನಲ್ಲಿರುವ ಕೋಳಿ ಫಾರಂಗೆ ನೀರು ನುಗಿದ್ದು, ಮೃತಪಟ್ಟಿರುವ ಕೋಳಿಗಳು
ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದ ಜಮೀನಿನಲ್ಲಿರುವ ಕೋಳಿ ಫಾರಂಗೆ ನೀರು ನುಗಿದ್ದು, ಮೃತಪಟ್ಟಿರುವ ಕೋಳಿಗಳು   

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ನಸುಕಿನಲ್ಲಿ ಭಾರಿ ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದ ತಿಮ್ಮೇಗೌಡ ಎಂಬುವರ ಜಮೀನಿನಲ್ಲಿರುವ ಕೋಳಿ ಫಾರಂಗೆ ನೀರು ನುಗ್ಗಿ 6 ಸಾವಿರಕ್ಕೂ ಅಧಿಕ ಕೋಳಿಗಳು ಕೊಚ್ಚಿಕೊಂಡು ಹೋಗಿವೆ.

ಚೆಲುವನಹಳ್ಳಿ ಕೆರೆಗೆ ಸಂಪರ್ಕ ಹೊಂದಿರುವ ರಾಜಕಾಲುವೆ ಉಕ್ಕಿ ಜಮೀನಿನ ಮೇಲೆ ನೀರು ಹರಿದು ಕೋಳಿ ಫಾರಂ ಶೆಡ್‌ನೊಳಗೆನುಗ್ಗಿದೆ. ಕೋಲಾರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಈ ಶೆಡ್‌ ಇದೆ.

ADVERTISEMENT

ಸುಮಾರು ₹ 12 ಲಕ್ಷ ನಷ್ಟವಾಗಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಕೋಳಿ ಫಾರಂ ಮಾಲೀಕ, ರೈತ ತಿಮ್ಮೇಗೌಡ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಕೋಲಾರ ತಾಲ್ಲೂಕು ತಹಶೀಲ್ದಾರ್‌ ನಾಗರಾಜ್‌ ಭೇಟಿ ನೀಡಿದ್ದು, ಪರಿಹಾರ ದೊರಕಿಸಿಕೊಡಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ರಾಜಕಾಲುವೆ ಒತ್ತುವರಿ ಕಾರಣ ಈ ಅನಾಹುತ ಸಂಭವಿಸಿದೆ ಎಂದಿದ್ದಾರೆ.

‘ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನಲ್ಲಿ 10.3 ಸೆ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಅಧಿಕ ಮಳೆಯಾಗಿರುವ ಪ್ರದೇಶ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೋಲಾರ ನಗರದ ಶಾಂತಿನಗರ, ಚೌಡೇಶ್ವರಿನಗರ ಹಾಗೂ ರಹಮತ್‌ ನಗರ ಬಡಾವಣೆಗಳಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಇಡೀ ನಿವಾಸಿಗಳು ನೀರನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.