ADVERTISEMENT

ಬಾಲ್ಯವಿವಾಹ ತಡೆದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಮೇ 2022, 15:41 IST
Last Updated 13 ಮೇ 2022, 15:41 IST

ವೇಮಗಲ್‌: ಗ್ರಾಮದ ಕೃಷ್ಣಾನಂದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಬೇಕಿದ್ದ ಬಾಲ್ಯವಿವಾಹ ತಡೆದಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಬಾಲಕಿಯನ್ನು ರಕ್ಷಿಸಿದ್ದಾರೆ.

ಗ್ರಾಮದ ಸಮೀಪದ ಕಲ್ಕೆರೆಯ 17 ವರ್ಷದ ಬಾಲಕಿಗೆ ಅದೇ ಗ್ರಾಮದ ಯುವಕನ ಜತೆ ಪೋಷಕರು ಮದುವೆ ನಿಶ್ಚಯ ಮಾಡಿದ್ದರು. ಅಲ್ಲದೇ, ಮದುವೆ ಆಮಂತ್ರಣ ಪತ್ರಿಕೆ ಹಂಚಿದ್ದರು. ಶುಕ್ರವಾರ ಮದುವೆ ನಡೆಯಬೇಕಿತ್ತು. ಮದುವೆಯ ಮುನ್ನ ದಿನವಾದ ಗುರುವಾರ ರಾತ್ರಿ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಸಮಾರಂಭ ಆಯೋಜನೆಯಾಗಿತ್ತು.

ಈ ಬಗ್ಗೆ ಗ್ರಾಮದ ವ್ಯಕ್ತಿಯೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಗುರುವಾರ ವಧುವಿನ ಮನೆಗೆ ಭೇಟಿ ಕೊಟ್ಟು ವಿಚಾರಣೆ ಮಾಡಿದಾಗ ಬಾಲ್ಯವಿವಾಹದ ಸಂಗತಿ ಗೊತ್ತಾಯಿತು. ನಂತರ ಅಧಿಕಾರಿಗಳು ಬಾಲಕಿಯ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಮದುವೆ ಮಾಡದಂತೆ ಎಚ್ಚರಿಕೆ ನೀಡಿದರು.

ADVERTISEMENT

‘ಬಾಲಕಿಯು ಎಸ್ಸೆಸ್ಸೆಲ್ಸಿ ನಂತರ ಶಿಕ್ಷಣ ಮೊಟಕುಗೊಳಿಸಿದ್ದಳು. ಆಕೆಗೆ 18 ವರ್ಷ ತುಂಬಲು ಇನ್ನೂ 40 ದಿನ ಬಾಕಿಯಿದೆ. ಆದರೆ, ಪೋಷಕರು ತರಾತುರಿಯಲ್ಲಿ ಸಂಬಂಧಿಕರ ಯುವಕನ ಜತೆ ಮಗಳ ಮದುವೆ ಮಾಡಲು ಮುಂದಾಗಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮದುವೆ ತಡೆಯಲು ಹೋದ ಸಿಬ್ಬಂದಿಯನ್ನು ಗ್ರಾಮದ ಜನರು ಹಾಗೂ ಬಾಲಕಿಯ ಕುಟುಂಬದವರು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ, ಸಿಬ್ಬಂದಿಯೊಂದಿಗೆ ಜಗಳವಾಡಿ ಕರ್ತವ್ಯಕ್ಕೆ ನಿರ್ವಹಣೆಗೆ ಅಡ್ಡಿಪಡಿಸಿದರು. ಹೀಗಾಗಿ ಪೊಲೀಸರನ್ನು ಗ್ರಾಮಕ್ಕೆ ಕರೆಸಿಕೊಂಡು ಮದುವೆ ತಡೆಯಲಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.