ADVERTISEMENT

ಮಕ್ಕಳ ಸುರಕ್ಷತೆ: ಮುನ್ನೆಚ್ಚರಿಕೆ ವಹಿಸಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 15:44 IST
Last Updated 14 ಜೂನ್ 2020, 15:44 IST

ಕೋಲಾರ: ‘ಎಲ್ಲೆಡೆ ಕೊರೊನಾ ಸೋಂಕಿತ ಆತಂಕ ಹೆಚ್ಚಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಶಾಲೆ ಆರಂಭಿಸಿ’ ಎಂದು ತಾಲ್ಲೂಕಿನ ಅಮ್ಮೇರಹಳ್ಳಿ ಗ್ರಾಮದ ಶಾಲೆಯ ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಸಲಹೆ ನೀಡಿದರು.

ಶಾಲೆಯಲ್ಲಿ ಶನಿವಾರ ನಡೆದ ಎಸ್‌ಡಿಎಂಸಿ ಸಭೆಯಲ್ಲಿ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಶಾಲೆ ತೆರೆಯಲು ಆಕ್ಷೇಪವಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಮುಖ್ಯ. ಮಕ್ಕಳು ಮನೆಯಿಂದಲೇ ಕುಡಿಯುವ ನೀರು ಮತ್ತು ಊಟ ತರುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕೆಲ ಪೋಷಕರು ಮಕ್ಕಳನ್ನು ಮಧ್ಯಾಹ್ನದ ಊಟಕ್ಕೆ ಮನೆಗೆ ಕಳುಹಿಸಿ ಬಿಡಿ. ಶೌಚಾಲಯ ಬಳಕೆ ವೇಳೆ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶಾಲೆಗೆ ಹತ್ತಿರದಲ್ಲೇ ಇರುವ ಮನೆಗಳಲ್ಲಿನ ಮಕ್ಕಳನ್ನು ಶೌಚಕ್ಕೆ ಮನೆಗೆ ಕಳುಹಿಸಿ. ಶಾಲಾ ಕೊಠಡಿಗಳನ್ನು ಕಾಲಕಾಲಕ್ಕೆ ಸ್ಯಾನಿಟೈಸ್ ಮಾಡಬೇಕು ಎಂದು ಪೋಷಕರು ಮನವಿ ಮಾಡಿದರು.

ADVERTISEMENT

‘ಶಾಲಾ ಕೊಠಡಿಗಳಲ್ಲಿ ಅಂತರ ಕಾಯ್ದುಕೊಳ್ಳುವ ಬಗ್ಗೆ  ಮಕ್ಕಳಿಗೆ ಅರಿವು ಮೂಡಿಸುತ್ತೇವೆ. ಈ ಬಗ್ಗೆ ಪೋಷಕರು ಸಹ ಮಕ್ಕಳಿಗೆ ತಿಳಿ ಹೇಳಬೇಕು. ಮಕ್ಕಳು ಮನೆಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ ಶಾಲೆಗೆ ಬರಬೇಕು’ ಎಂದು ಶಾಲೆ ಮುಖ್ಯ ಶಿಕ್ಷಕಿ ಲಕ್ಷ್ಮಿದೇವಮ್ಮ ತಿಳಿಸಿದರು.

ಸರ್ಕಾರಿ ಶಾಲೆಗೆ ಸೇರಿಸಿ

‘ಕೋವಿಡ್-19 ಸಂಕಷ್ಟದಲ್ಲಿ ಶಾಲೆ ಆರಂಭಕ್ಕೆ ಪೋಷಕರು ಸಲಹೆ ನೀಡಬೇಕು. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಮಕ್ಕಳನ್ನು ಉತ್ತಮ ಸೌಲಭ್ಯಗಳಿರುವ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು’ ಎಂದು  ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಕಿವಿಮಾತು ಹೇಳಿದರು.

ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಪಿ.ಲೀಲಾ, ಶಶಿಕಲಾ, ಪುಷ್ಪ, ಪ್ರೇಮಕುಮಾರಿ, ಗೀತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.