ADVERTISEMENT

ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 15:14 IST
Last Updated 1 ಡಿಸೆಂಬರ್ 2019, 15:14 IST
ಕೋಲಾರದ ಬಾಲ್ಡ್‌ವಿನ್ ಶಾಲಾ ಆವರಣದಲ್ಲಿ ಶನಿವಾರ ಆರಂಭವಾದ ಕ್ರೀಡಾಕೂಟದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಧ್ವಜಾರೋಹಣ ನೇರವೇರಿಸಿದರು.
ಕೋಲಾರದ ಬಾಲ್ಡ್‌ವಿನ್ ಶಾಲಾ ಆವರಣದಲ್ಲಿ ಶನಿವಾರ ಆರಂಭವಾದ ಕ್ರೀಡಾಕೂಟದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಧ್ವಜಾರೋಹಣ ನೇರವೇರಿಸಿದರು.   

ಕೋಲಾರ: ‘ಕ್ರೈಸ್ತ ಮಿಷನರಿಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ನಗರದ ಬಾಲ್ಡ್‌ವಿನ್ ಶಾಲೆಯಲ್ಲಿ ಶನಿವಾರ ಆರಂಭವಾದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ‘
ದೇಶದಲ್ಲಿ ಶಿಕ್ಷಣ ಬಡವರಿಗೆ ಎಟುಕದಿರುವ ಸಂದರ್ಭದಲ್ಲಿ ಉಚಿತವಾಗಿ ಶಿಕ್ಷಣ ಕೊಟ್ಟವರು ಮಿಷನರಿಗಳು, ಯಾವ ಫಲಾಪೇಕ್ಷೆಯೂ ಇಲ್ಲದೆ ದೇಶದ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.

ಮನುಷ್ಯನಿಗೆ ಕ್ರೀಡೆ ಮುಖ್ಯ, ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಗತ್ಯ. ಇತ್ತೀಚೆಗೆ ದೇಶದಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಿಂದ ಜನ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಜನ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ನಿವಾರಣೆಗೆ ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ. ಇದಕ್ಕೆ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯವಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮ, ಸಮನಾಗಿ ಮುಂದುವರಿಸಿಕೊಂಡು ಹೋಗಬೇಕು. ಇದರಿಂದ ದೈಹಿಕ ಸಾಮರ್ಥ್ಯ ಲಭ್ಯವಾಗುತ್ತದೆ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಪೋಷಕರು ಸಹ ಮಕ್ಕಳಿಗೆ ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.

ಮೆಥೋಡಿಸ್ಟ್ ಸಂಸ್ಥೆಯ ಜಿಲ್ಲಾ ಮೇಲ್ವಿಚಾರಕ ಪಿ.ಶಾಂತ ಕುಮಾರ್ ಮಾತನಾಡಿ, ‘ಸಂಸ್ಥೆಯು ಜಿಲ್ಲೆಯ ಜನತೆಗೆ ಕಳೆದ ಒಂದು ಶತಮಾನದಿಂದ ಅನೇಕ ಕಾರ್ಯ ಯೋಜನೆಗಳನ್ನು ಇಟ್ಟು ಕೊಂಡು ಸೇವೆ ಸಲ್ಲಿಸುತ್ತಾ ಬಂದಿದೆ ಮುಂದೆಯೂ ತನ್ನ ಸೇವೆಯನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದರು.

ಪ್ರಾಂಶುಪಾಲೆ ಸುಜಾತಾ ಕ್ರಿಸ್ಟೀನಾ, ಫಾದರ್ ಜಯವಂತ್ ಎಲಿಯಾ, ರೆವರೆಂಡ್ ಗಮಲೀಯ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಸೋಮಣ್ಣ, ರವಿ ಸಮೂಹ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಇ.ಗೋಪಾಲ್, ದೈಹಿಕ ಶಿಕ್ಷಕ ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.