ADVERTISEMENT

ಕೋಲಾರ: ಮನೆ ಮನದಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಮದುವಣಗಿತ್ತಿಯಂತೆ ಸಿಂಗಾರಗೊಂಡ ಚರ್ಚ್‌ಗಳು: ಮಧುರ ಕ್ಷಣಕ್ಕೆ ಕ್ರೈಸ್ತರ ಕಾತುರ

ಜೆ.ಆರ್.ಗಿರೀಶ್
Published 24 ಡಿಸೆಂಬರ್ 2021, 19:30 IST
Last Updated 24 ಡಿಸೆಂಬರ್ 2021, 19:30 IST
ಕೋಲಾರದ ಮೆಥೋಡಿಸ್ಟ್‌ ಚರ್ಚ್‌ ಉದ್ಯಾನದಲ್ಲಿ ವಿದ್ಯುತ್‌ ದೀಪಾಲಂಕಾರದ ನೋಟ
ಕೋಲಾರದ ಮೆಥೋಡಿಸ್ಟ್‌ ಚರ್ಚ್‌ ಉದ್ಯಾನದಲ್ಲಿ ವಿದ್ಯುತ್‌ ದೀಪಾಲಂಕಾರದ ನೋಟ   

ಕೋಲಾರ: ಶಾಂತಿ, ಪ್ರೀತಿ, ಮಮತೆಯ ಸಂದೇಶ ಸಾರಿದ ಯೇಸು ಕ್ರಿಸ್ತನ ಜನ್ಮ ದಿನದ ಪ್ರತೀಕವಾದ ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲಾ ಕೇಂದ್ರದ ಚರ್ಚ್‌ಗಳು ಕೋವಿಡ್‌ ಆತಂಕದ ನಡುವೆಯೂ ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.

ನಗರದಲ್ಲಿ ಹಾಗೂ ಅಕ್ಕಪಕ್ಕದ ಬೆತ್ತನಿ, ಈಲಂ, ಮಂಗಸಂದ್ರ, ಚಿನ್ನಾಪುರ, ಹರಳಕುಂಟೆ, ವೇಮಗಲ್‌, ವಕ್ಕಲೇರಿ, ನಡುಪಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಮನೆ ಮನದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ನಗರ ಸೇರಿದಂತೆ ಸುತ್ತಮುತ್ತ 15ಕ್ಕೂ ಹೆಚ್ಚು ಚರ್ಚ್‌ಗಳಿದ್ದು, ಈ ಪೈಕಿ ಮೆಥೋಡಿಸ್ಟ್‌ ಹಾಗೂ ಸಂತ ಮೇರಿಯಮ್ಮ ಚರ್ಚ್‌ನಲ್ಲಿ ಅದ್ಧೂರಿಯಾಗಿ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. ಚರ್ಚ್‌ಗಳಿಗೆ ಬಣ್ಣ ಬಳಿದು ಸಿಂಗರಿಸಲಾಗಿದೆ. ಚರ್ಚ್‌ಗಳ ಒಳಗೆ ಹಾಗೂ ಹೊರಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ನಕ್ಷತ್ರ ದೀಪಗಳು ಚರ್ಚ್‌ನ ಸೌಂದರ್ಯ ಇಮ್ಮಡಿಗೊಳಿಸಿವೆ.

ADVERTISEMENT

ಬೇಕರಿಗಳಲ್ಲಿ ವಿವಿಧ ವಿನ್ಯಾಸದ ಕೇಕ್‌ಗಳ ವಹಿವಾಟು ಭರ್ಜರಿಯಾಗಿದೆ. ಪರಿಮಳ ಬೀರುವ ಕುಸ್ವಾರ್‌ಗಳು, ಕ್ರಿಸ್‌ಮಸ್‌ ಟ್ರೀ ಮತ್ತು ಸಾಂಟಾ ಕ್ಲಾಸ್‌ ಉಡುಪಿನ ಖರೀದಿ ಜೋರಾಗಿದೆ. ಚರ್ಚ್‌ನ ಭಜನಾ ಸಮಿತಿ ಸದಸ್ಯರು ಕ್ರೈಸ್ತ ಸಮುದಾಯವರ ಮನೆ ಮನೆಗೆ ತೆರಳಿ ಯೇಸುವಿನ ಸಂದೇಶ ಕೊಟ್ಟಿದ್ದಾರೆ.

ಪ್ರೊಟೆಸ್ಟೆಂಟ್‌ ಪಂಗಡದವರಿಗೆ ಸೇರಿದ ಮೆಥೋಡಿಸ್ಟ್‌ ಚರ್ಚ್‌ಗೆ ಶತಮಾನದ ಇತಿಹಾಸವಿದೆ. 1902ರಲ್ಲಿ ನಿರ್ಮಾಣವಾದ ಈ ಚರ್ಚ್‌ನ ಹಳೆ ಸಭಾಂಗಣವನ್ನು ಹಾಗೆಯೇ ಉಳಿಸಿಕೊಂಡು ಪಕ್ಕದಲ್ಲಿ 1977ರಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಪ್ರೊಟೆಸ್ಟೆಂಟ್‌ ಪಂಗಡಕ್ಕೆ ಸೇರಿದ ಸುಮಾರು 800 ಕುಟುಂಬಗಳು ನೆಲೆಸಿವೆ. ಈ ಕುಟುಂಬಗಳು ಶಿಲುಬೆ, ಪ್ರತಿಮೆ ಹಾಗೂ ವಿಗ್ರಹ ಪೂಜಿಸದೆ ಯೇಸುವನ್ನು ಮಾತ್ರ ಆರಾಧಿಸುತ್ತವೆ.

ಸಂತ ಮೇರಿಯಮ್ಮ ಚರ್ಚ್‌ ರೋಮನ್‌ ಕ್ಯಾಥೋಲಿಕ್‌ ಪಂಗಡಕ್ಕೆ ಸೇರಿದೆ. 1865ರಲ್ಲಿ ನಿರ್ಮಾಣವಾದ ಈ ಚರ್ಚ್‌ನ ನವೀಕರಣ ಕಾರ್ಯ 1965ರಲ್ಲಿ ನಡೆದಿತ್ತು. ರೋಮನ್‌ ಕ್ಯಾಥೋಲಿಕ್‌ ಪಂಗಡದ 160 ಕುಟುಂಬಗಳು ಜಿಲ್ಲಾ ಕೇಂದ್ರದಲ್ಲಿ ನೆಲೆಸಿದ್ದು, ಈ ಕುಟುಂಬಗಳು ಮೇರಿಯಮ್ಮ, ಜೋಸೆಫ್ ಮತ್ತು ಯೇಸುವನ್ನು ಪೂಜಿಸುತ್ತವೆ.

ಗೋದಲಿ ನಿರ್ಮಾಣ: ಕೊಟ್ಟಿಗೆಯಲ್ಲಿ ಯೇಸು ಕ್ರಿಸ್ತರ ಜನನ ವೃತ್ತಾಂತ ಸಂಕೇತಿಸುವ ಗೋದಲಿಗಳನ್ನು ಚರ್ಚ್‌ನ ಆವರಣದಲ್ಲಿ ನಿರ್ಮಿಸಲಾಗಿದೆ. ಕ್ರಿಸ್‌ಮಸ್‌ಆಚರಣೆಯಲ್ಲಿ ಗೋದಲಿಯು ಆಕರ್ಷಣೆಯ ಕೇಂದ್ರ ಬಿಂದು. ಗೋದಲಿಯಲ್ಲಿ ಯೇಸುವಿನ ತಂದೆ ಜೋಸೆಫ್‌, ತಾಯಿ ಮೇರಿ, ಬಾಲ ಯೇಸು, ಕುರಿಗಾಹಿಗಳು, ಆಡು-, ಕುರಿ, ಜಾನುವಾರು, ಕತ್ತೆ, ಒಂಟೆ, ಯೇಸುವಿನ ಭೇಟಿಗೆ ಆಗಮಿಸಿದ ಜ್ಯೋತಿಷಿಗಳು ಹಾಗೂ ದೇವದೂತರ ಮೂರ್ತಿಗಳಿವೆ.

ವಿಶೇಷ ಭಕ್ಷ್ಯಗಳು: ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ನಕ್ಷತ್ರ ದೀಪ ಹಾಗೂ ಗೋದಲಿಗಳು ಹಬ್ಬದ ಸಂಭ್ರಮ ಹೆಚ್ಚಿಸಿವೆ. ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಮನೆಗಳಲ್ಲಿ ಶುಕ್ರವಾರ ವಿವಿಧ ವಿಶೇಷ ಭಕ್ಷ್ಯ ಸಿದ್ಧಪಡಿಸಲಿದ್ದಾರೆ. ಬಿರಿಯಾನಿ, ಕಬಾಬ್‌, ಕಲ್‌ಕಲಾ, ಮೊಟ್ಟೆ ಕಜ್ಜಾಯ, ಕರ್ಜಿಕಾಯಿ, ಕೋಡುಬಳೆ, ಚಕ್ಕುಲಿ, ಜಾಮೂನು, ಕರಿದ ಅವಲಕ್ಕಿ (ಚುವಡಾ), ರವೆ ಉಂಡೆ, ರೋಸ್‌ ಕುಕ್‌, ಫಿರ್ನಿ, ಡೋನಟ್ಸ್‌, ನಿಪ್ಪಟ್ಟು, ಕ್ಯಾರೆಟ್‌ ಹಲ್ವಾ, ಅಕ್ಕಿ ಮಿಠ್ಠಾ ತಯಾರಿಸುತ್ತಾರೆ. ಜತೆಗೆ ವಿವಿಧ ಬಗೆಯ ಕೇಕ್‌ ಸಿದ್ಧಪಡಿಸುತ್ತಾರೆ.

ಸಾಂಟಾ ಕ್ಲಾಸ್‌ ವೇಷಧಾರಿಗಳು ಮಕ್ಕಳಿಗೆ ಉಡುಗೊರೆ ನೀಡಲಿದ್ದಾರೆ. ಕೆಲ ಚರ್ಚ್‌ಗಳಲ್ಲಿ ಶುಕ್ರವಾರ ರಾತ್ರಿಯೇ ಸಾಮೂಹಿಕ ಪ್ರಾರ್ಥನೆ ನಡೆಯಿತು. ಶನಿವಾರವೂ (ಡಿ.25) ಬೈಬಲ್‌ ಪಠಣ, ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಆ ಮಧುರ ಕ್ಷಣಕ್ಕಾಗಿ ಕ್ರೈಸ್ತ ಬಾಂಧವರು ಕಾತುರದಿಂದ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.