ADVERTISEMENT

ಪೌರ ಕಾರ್ಮಿಕರು ಸಮಾಜದ ಭಾಗ

​ಪ್ರಜಾವಾಣಿ ವಾರ್ತೆ
Published 22 ಮೇ 2021, 13:32 IST
Last Updated 22 ಮೇ 2021, 13:32 IST
ನಗರಸಭೆ ಪೌರ ಕಾರ್ಮಿಕರಿಗೆ ಕೋಲಾರದಲ್ಲಿ ಶನಿವಾರ ಕೋವಿಡ್‌ ಲಸಿಕೆ ಹಾಕಲಾಯಿತು.
ನಗರಸಭೆ ಪೌರ ಕಾರ್ಮಿಕರಿಗೆ ಕೋಲಾರದಲ್ಲಿ ಶನಿವಾರ ಕೋವಿಡ್‌ ಲಸಿಕೆ ಹಾಕಲಾಯಿತು.   

ಕೋಲಾರ: ‘ಇಡೀ ದೇಶ ಇಂದು ಕೊರೊನಾ ಸೋಂಕಿನ ಮುಂದೆ ಮಂಡಿಯೂರಿ ಕುಳಿತಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲೂ ಪೌರ ಕಾರ್ಮಿಕರು ಜೀವದ ಹಂಗು ತೊರೆದು ಹಗಲಿರುಳು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್‌ ಸ್ಮರಿಸಿದರು.

ಇಲ್ಲಿ ಶನಿವಾರ ನಡೆದ ನಗರಸಭೆ ಪೌರ ಕಾರ್ಮಿಕರಿಗೆ ಕೋವಿಡ್‌ ಲಸಿಕೆ ನೀಡಿಕೆ ಶಿಬಿರದಲ್ಲಿ ಮಾತನಾಡಿ, ‘ಎಲ್ಲೆಡೆ ಕೋವಿಡ್‌ ಆತಂಕ ಹೆಚ್ಚಿದೆ. ಇಂತಹ ವಿಷಮ ಸ್ಥಿತಿಯಲ್ಲೂ ಪೌರ ಕಾರ್ಮಿಕರು ಕುಟುಂಬ ಸದಸ್ಯರಿಂದ ದೂರವಾಗಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ’ಎಂದು ಹೇಳಿದರು.

‘ಪೌರ ಕಾರ್ಮಿಕರು ಸಹ ಮನುಷ್ಯರೇ. ಜನರು ಅವರನ್ನು ಸಮಾಜದ ಅವಿಭಾಜ್ಯ ಅಂಗವೆಂದು ಪರಿಗಣಿಸಬೇಕು. ಆದರೆ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಪೌರ ಕಾರ್ಮಿಕರನ್ನು ಸಮಾಜ ಮೂರನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಪೌರ ಕಾರ್ಮಿಕರಲ್ಲಿ ಶೇ 90ರಷ್ಟು ಮಂದಿ ನಾನಾ ಕಾಯಿಲೆಗೆ ತುತ್ತಾಗಿ ಸೇವಾವಧಿ ಪೂರ್ಣಗೊಳ್ಳುವ ಮುನ್ನವೇ ಮೃತಪಡುತ್ತಿದ್ದಾರೆ. ಶೇ 10ರಷ್ಟು ಮಂದಿ ಮಾತ್ರ ಸೇವಾವಧಿ ಪೂರ್ಣಗೊಳಿಸಿ ಪಿಂಚಣಿ ಪಡೆಯುತ್ತಾರೆ. ಹಗಲು ರಾತ್ರಿ ಸೇನಾನಿಗಳಂತೆ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಸಮಾಜ ಗೌರವಯುತವಾಗಿ ಕಾಣಬೇಕು’ ಎಂದು ಹೇಳಿದರು.

‘ಕೊರೊನಾ ಸೋಂಕಿನ ತಡೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರ ನಿಸ್ವಾರ್ಥ ಸೇವೆ ಗುರುತಿಸಿ ಪ್ರೇರೇಪಿಸಬೇಕು. ಪೌರ ಕಾರ್ಮಿಕರು ಕೆಲಸದ ಜತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡಿಸಿ ಸುಶಿಕ್ಷಿತರಾಗಿ ಮಾಡುವ ಮೂಲಕ ಭವಿಷ್ಯ ಉಜ್ವಲಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಪೌರ ಕಾರ್ಮಿಕರು ದೈನಂದಿನ ಕೆಲಸ ಮುಗಿಸಿ ಮನೆಗೆ ಹೋದ ನಂತರ ಸ್ನಾನ ಮಾಡಬೇಕು. ಕೆಲಸದ ವೇಳೆ ಕಡ್ಡಾಯವಾಗಿ ಸುರಕ್ಷತಾ ಸಲಕರಣೆ ಬಳಸಬೇಕು. ಮನೆಗಳಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.