ADVERTISEMENT

ಕೋಲಾರ | ಸವರ್ಣೀಯರು–ಪರಿಶಿಷ್ಟರ ನಡುವೆ ಘರ್ಷಣೆ: ಪೊಲೀಸರಿಂದ ಶಾಂತಿಸಭೆ

ಪರಿಶಿಷ್ಟರ ಮನೆ ಮುಂದೆ ಕೊನೆಯಲ್ಲಿ ದೇವರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 14:13 IST
Last Updated 6 ಅಕ್ಟೋಬರ್ 2022, 14:13 IST
ಪೊಲೀಸರಿಂದ ಶಾಂತಿಸಭೆ
ಪೊಲೀಸರಿಂದ ಶಾಂತಿಸಭೆ   

ಕೋಲಾರ: ಪರಿಶಿಷ್ಟರ ಮನೆ ಮುಂದೆ ದೇವರ ಉತ್ಸವ ಮೂರ್ತಿ ಮೆರವಣಿಗೆ ಸಾಗುವ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ವಿಚಾರವಾಗಿ ತಾಲ್ಲೂಕಿನ ಬೆಳಮಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ದಾನವಹಳ್ಳಿ ಗ್ರಾಮದಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಪರಿಶಿಷ್ಟರು ಹಾಗೂ ಸವರ್ಣೀಯರು ಕಲ್ಲು, ದೊಣ್ಣೆ, ಇಟ್ಟಿಗೆಯಿಂದ ಹೊಡೆದಾಡಿಕೊಂಡಿದ್ದಾರೆ. ಎರಡೂ ಗುಂಪಿನ ಹಲವರಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೇಮಗಲ್‌ ಪೊಲೀಸ್‌ ಠಾಣೆಯಲ್ಲಿ 9 ಮಂದಿ ಸರ್ವರ್ಣೀಯರ ಮೇಲೆ ದೌರ್ಜನ್ಯ ಪ್ರಕರಣ ಹಾಗೂ 11 ಮಂದಿ ಪರಿಶಿಷ್ಟರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ದಸರಾ ಹಬ್ಬದ ಪ್ರಯುಕ್ತ ಗ್ರಾಮದ‌ಲ್ಲಿ ಬುಧವಾರ ಗಂಗಮ್ಮ ದೇವಿ ಹಾಗೂ ಕಾಟೇರಮ್ಮ ದೇವಿ ಮೆರವಣಿಗೆ ಆಯೋಜಿಸಲು ಸಿದ್ಧತೆ ನಡೆದಿತ್ತು. ಉತ್ಸವ ಮೂರ್ತಿ ಸಾಗುವ ಮಾರ್ಗದ ಸಂಬಂಧ ಊರಿನ ಅಶ್ವತ್ಥಕಟ್ಟೆಯಲ್ಲಿ ಗ್ರಾಮಸ್ಥರು ಸಭೆ ನಡೆಸಿದ್ದಾರೆ, ‘ಪರಿಶಿಷ್ಟರ ಮನೆಗಳ ಬಳಿ ಏಕೆ ಉತ್ಸವ ಮೂರ್ತಿಯನ್ನು ಕೊನೆಯದಾಗಿ ತಂದು ತರಾತುರಿಯಲ್ಲಿ ತೆಗೆದುಕೊಂಡು ಹೋಗುತ್ತೀರಿ’ ಎಂದು ಪರಿಶಿಷ್ಟ ಯುವಕರು ಪ್ರಶ್ನಿಸಿದ್ದಾರೆ. ‘ಹಿಂದಿನ ಪದ್ಧತಿಯಂತೆಯೇ ಉತ್ಸವ ನಡೆಯಲಿ’ ಎಂದು ಸವರ್ಣೀಯರು ಹೇಳಿದ್ದಾರೆ.

ADVERTISEMENT

ಆಗ ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದಿದೆ. ಪೊಲೀಸರ ಸಮ್ಮುಖದಲ್ಲಿ ಹೊಡೆದಾಡಿಕೊಂಡಿದ್ದಾರೆ.

ಪೂಜಾರಿ ಮೈಮೇಲೆ ದೇವರು!: ‘ನನ್ನನ್ನು ಬೀದಿಯಲ್ಲಿ ಕೂರಿಸಿ ಜಗಳವಾಡುತ್ತಿದ್ದೀರಾ? ಮೊದಲು ಉತ್ಸವ ಮಾಡಿ, ನಾಳೆ ಮಾತನಾಡಿಕೊಳ್ಳಿ’ ಎಂದು ಪೂಜಾರಿ ಮೈಮೇಲೆ ದೇವರು ಬಂದು ಪ್ರಶ್ನಿಸಿರುವ ಪ್ರಸಂಗವೂ ನಡೆದಿದೆ.

ಆಗ ಪೊಲೀಸರು, ‘ಊರಿನಲ್ಲಿ ಸಮಸ್ಯೆ ಇದೆ. ಸಮಸ್ಯೆ ಬಗೆಹರಿದ ಮೇಲೆ ಉತ್ಸವ ಮಾಡೋಣ. ದೇವರಿಗೆ ಎಲ್ಲರೂ ಒಂದೇ ಅಲ್ಲವೇ? ಎಲ್ಲರ ಬೀದಿಗೂ ಹೋಗು’ ಎಂದು ಪೂಜಾರಿಯನ್ನು ಸಮಾಧಾನಪಡಿಸಿದರು.

ಪೊಲೀಸರಿಂದ ಶಾಂತಿಸಭೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಹಾಗೂ ತಹಶೀಲ್ದಾರ್‌ ವಿ.ನಾಗರಾಜ್‌ ನೇತೃತ್ವದಲ್ಲಿ ಗುರುವಾರ ಗ್ರಾಮದಲ್ಲಿ ಶಾಂತಿಸಭೆ ನಡೆದಿದ್ದು, ದೇವರ ಮೆರವಣಿಗೆ ಸಾಗುವ ಮಾರ್ಗ (ರೂಟ್ ಮ್ಯಾಪ್‌) ಗುರುತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.