ADVERTISEMENT

ಮುಳಬಾಗಿಲು | ಸೈಕಲ್‌ನಲ್ಲಿ ಜಿಲ್ಲಾಧಿಕಾರಿ ನಗರ ಪ್ರದಕ್ಷಿಣೆ

ನಗರದ ಉದ್ಯಾನಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:53 IST
Last Updated 22 ಸೆಪ್ಟೆಂಬರ್ 2025, 5:53 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾನುವಾರ ಸೈಕಲ್ ಮೂಲಕ ಮುಳಬಾಗಿಲು ನಗರದಲ್ಲಿ ಸ್ವಚ್ಛತೆ ಕುರಿತು ಅಭಿಯಾನ ನಡೆಸಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾನುವಾರ ಸೈಕಲ್ ಮೂಲಕ ಮುಳಬಾಗಿಲು ನಗರದಲ್ಲಿ ಸ್ವಚ್ಛತೆ ಕುರಿತು ಅಭಿಯಾನ ನಡೆಸಿದರು   

ಮುಳಬಾಗಿಲು: ಜಿಲ್ಲಾಧಿಕಾರಿ ಎಂ.ಆರ್.ರವಿ ಭಾನುವಾರ ಬೆಳ್ಳಂಬೆಳಿಗ್ಗೆ ಸೈಕಲ್‌ನಲ್ಲಿ ಅಧಿಕಾರಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದರು. ನಗರದ ಚಾಚಾ ನೆಹರು ಉದ್ಯಾನವನ, ಸೋಮೇಶ್ವರ ಪಾಳ್ಯ, ಬಜಾರು ರಸ್ತೆ, ತಾಲ್ಲೂಕು ಕಚೇರಿ ಬೀದಿ, ಡಿವಿಜಿ ವೃತ್ತ, ಕೆಇಬಿ ವೃತ್ತ ಮತ್ತಿತರರ ಬೀದಿಗಳಲ್ಲಿ ಸಾಗಿದರು.

ಚಾಚಾ ನೆಹರು ಉದ್ಯಾನವನದಲ್ಲಿ ಬೆಳಗ್ಗೆ ವಾಯು ವಿಹಾರಿಗಳ ಜೊತೆಗೆ ಕೆಲ ಕಾಲ ಉದ್ಯಾನವನ ಸ್ವಚ್ಛತೆ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಿದರು. ನಂತರ ಇಂದಿರಾ ಕ್ಯಾಂಟೀನ್, ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಐತಿಹಾಸಿಕ ಹಾಗೂ ಪೌರಾಣಿಕ ಸ್ಥಳಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಸ್ವಚ್ಛತಾ ಅಭಿಯಾನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದ ಅವರು ಮಾತನಾಡಿ, ನಗರ ಬಹುತೇಕ ಸ್ವಚ್ಛವಾಗಿದೆ, ಕೆಲವು ಸ್ಥಳಗಳಲ್ಲಿ ಸ್ವಚ್ಛತೆಯ ಅಗತ್ಯವಿದೆ. ನಗರದ ಕೆಇಬಿ ವೃತ್ತ, ಸೋಮೇಶ್ವರ ನಗರ ಉದ್ಯಾನವನ ಮತ್ತಷ್ಟು ಅಭಿವೃದ್ಧಿ ಆಗಬೇಕಾಗಿದೆ. ಸಾರ್ವಜನಿಕರು ಸಹ ನಗರಸಭೆಯ ಜೊತೆ ಸ್ವಚ್ಛತೆಯ ಬಗ್ಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ವಿ.ಗೀತಾ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸರ್ವೇಶ್, ನಗರಸಭೆಯ ಪೌರಾಯುಕ್ತ ವಿ.ಶ್ರೀಧರ್, ಕೋಲಾರ ಜಿಲ್ಲಾ ಯೋಜನಾ ನಿರ್ದೇಶಕಿ ಅಂಬಿಕ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ವೆಂಕಟಾಚಲಪತಿ, ಕಂದಾಯಧಿಕಾರಿ ನಾರಾಯಣ, ಪರಿಸರ ಇಂಜಿನಿಯರ್ ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಕಿ ವಿ.ಪ್ರತಿಭ, ನಗರಸಭೆ ಸದಸ್ಯರು, ನಗರಸಭೆ ಸಿಬ್ಬಂದಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.