ADVERTISEMENT

ಒತ್ತುವರಿ ತೆರವು: ಜಿಲ್ಲಾಧಿಕಾರಿ ಗಡುವು

ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಡಿ.ಸಿ ಸತ್ಯಭಾಮ ನಗರ ಪ್ರದಕ್ಷಿಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:43 IST
Last Updated 7 ಫೆಬ್ರುವರಿ 2021, 1:43 IST
ಕೋಲಾರ ನಗರದ ಶ್ರೀನಿವಾಸಪುರ ರಸ್ತೆಯ ವೃತ್ತದಿಂದ ಚಿಕ್ಕಬಳ್ಳಾಪುರ ಮಾರ್ಗದ ರೈಲ್ವೆ ಸೇತುವೆವರೆಗೆ ರಸ್ತೆಗಳ ಒತ್ತುವರಿಯನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು
ಕೋಲಾರ ನಗರದ ಶ್ರೀನಿವಾಸಪುರ ರಸ್ತೆಯ ವೃತ್ತದಿಂದ ಚಿಕ್ಕಬಳ್ಳಾಪುರ ಮಾರ್ಗದ ರೈಲ್ವೆ ಸೇತುವೆವರೆಗೆ ರಸ್ತೆಗಳ ಒತ್ತುವರಿಯನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು   

ಕೋಲಾರ: ನಗರದಲ್ಲಿ ರಸ್ತೆಗಳು, ಚರಂಡಿ ಒತ್ತುವರಿ ಆಗುವುದನ್ನು ತಡೆಯಬೇಕು. ಒತ್ತುವರಿ ಮಾಡಿಕೊಂಡಿರುವವರು ಎಂತಹ ಪ್ರಭಾವಿಗಳೇ ಆದರೂ ತೆರವುಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

ನಗರಸಭೆ ಮತ್ತು
ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ನಗರದ ಶ್ರೀನಿವಾಸಪುರ ರಸ್ತೆಯ ವೃತ್ತದಿಂದ ಚಿಕ್ಕಬಳ್ಳಾಪುರ ಮಾರ್ಗದ ರೈಲ್ವೆ ಸೇತುವೆವರೆಗೆ ರಸ್ತೆಗಳ ಒತ್ತುವರಿ ವೀಕ್ಷಿಸಿ ಒತ್ತುವರಿದಾರರಿಗೆ ನೋಟಿಸ್ ಕೊಟ್ಟು ತೆರವಿಗೆ ಸೂಚನೆ ನೀಡಿದರು.

ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು. ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಸಾರ್ವಜನಿಕರಿಗೆ ತೊಂದರೆ ನೀಡುವುದು, ಸಂಚಾರಕ್ಕೆ ಅಡ್ಡಿ ಪಡಿಸುವುದು ಸೂಕ್ತವಲ್ಲ ಎಂದು ಜಿಲ್ಲಾಧಿಕಾರಿ
ಹೇಳಿದರು.

ADVERTISEMENT

‘ಬುಧವಾರದೊಳಗೆ ಸೂಚಿಸಿದ ಎಲ್ಲ ಕೆಲಸಗಳು ಪೂರ್ಣಗೊಂಡಿರಬೇಕು. ಮತ್ತೆ ಸ್ಥಳ ಪರಿಶೀಲನೆ ಮಾಡುತ್ತೇನೆ’ ಎಂದರು.

ರಸ್ತೆ ಬದಿಯ ಚರಂಡಿಗಳಲ್ಲಿ ಕಸವನ್ನು ಹಾಕುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ರೋಗಗಳಿಗೆ ಅವಕಾಶ ಮಾಡಿ ಕೊಟ್ಟಂತಾಗುವುದು. ಹಾಗಾಗಿ ಸಾರ್ವಜನಿಕರು ತಮ್ಮ ಸುತ್ತಮುತ್ತಲು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ರಸ್ತೆಬದಿಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲ್ಲಿಸಬಾರದು. ವಾಹನಗಳ ಸಂಚಾರಕ್ಕೆ ಅನುವು ಮಾಡಬೇಕು. ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸುವವರಿಗೆ ದಂಡ ವಿಧಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಮೀಪದ ಟರ್ಮಿನಲ್ ಟ್ರಕ್ ಲಾರಿ, ಟೆಂಪು ನಿಲ್ದಾಣಗಳು ನಗರಸಭೆಗೆ ಸೇರಿದ ಆಸ್ತಿಯಾಗಿರುವುದರಿಂದ ಲಾರಿ, ಟೆಂಪುಗಳ ಬಳಿ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡಿ ಚಾಲಕರಿಗೆ ಅಗತ್ಯವಾದ ಮೂಲ ಸೌಲಭ್ಯಕಲ್ಪಿಸಿ ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ನಗರ ಯೋಜನಾ ನಿರ್ದೇಶಕ ರಾಮಸ್ವಾಮಿ, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಮುಸ್ಟಕ್ ಆಹಮದ್, ಅಮೃತ ಯೋಜನಾಧಿಕಾರಿ ನಾರಾಯಣಸ್ವಾಮಿ, ಶ್ರೀನಾಥ್, ನಗರಸಭೆ ಎಂಜಿನಿಯರ್ ರಾಮಮೂರ್ತಿ, ಪರಿಸರ ಅಧಿಕಾರಿ ಪುನೀತ್, ನಗರಸಭೆ ಕಂದಾಯಾಧಿಕಾರಿ ಚಂದ್ರು, ನಿರೀಕ್ಷಕ ತ್ಯಾಗರಾಜ್, ನಾರಾಯಣಸ್ವಾಮಿ, ಮುಹೂಬೂಪ್ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.