ಕೋಲಾರ: ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾವುದೇ ವಿಚಾರದಲ್ಲಿ ಕಿತ್ತಾಡದೆ ಒಗ್ಗಟಿನಿಂದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸೋಮವಾರ ಸಂಜೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಶಾಸಕರ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
ಈಚೆಗೆ ಕೋಲಾರ ಹಾಲು ಒಕ್ಕೂಟ (ಕೋಮುಲ್) ಹಾಗೂ ಡಿಸಿಸಿ ಬ್ಯಾಂಕ್ ವಿಚಾರವಾಗಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ಬಿರುಕು ಉಂಟಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಈ ಸೂಚನೆ ಮಹತ್ವ ಪಡೆದುಕೊಂಡಿದೆ.
ಮೂಲಗಳ ಪ್ರಕಾರ ಸಭೆಯಲ್ಲಿ ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಬಗ್ಗೆ ಹೆಚ್ಚು ಚರ್ಚೆ ನಡೆಯದಿದ್ದರೂ ಸಿದ್ದರಾಮಯ್ಯ ಅವರು ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಎಸ್.ಎನ್.ನಾರಾಯಣಸ್ವಾಮಿ ಉದ್ದೇಶಿಸಿ ಈ ಮಾತು ಹೇಳಿರುವುದು ಗೊತ್ತಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಕೆಲ ದಿನಗಳ ಹಿಂದೆ ಕೋಮುಲ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ನಾರಾಯಣಸ್ವಾಮಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಶಾಸಕರ ಅಹವಾಲು ಆಲಿಸಿ ಗ್ಯಾರಂಟಿ ಯೋಜನೆಗಳು, ಬಜೆಟ್ ಘೋಷಣೆಗಳು ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಸಲಹೆ, ಸೂಚನೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ ಆಗಿರುವ ಅಭಿವೃದ್ಧಿ ಕೆಲಸಗಳು ಹಾಗೂ ಬಿಡುಗಡೆಯಾಗಿರುವ ಅನುದಾನ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ ಬೇಕೆಂದು, ಈಗ ನೀಡಿರುವುದು ಸಾಕಾಗುವುದಿಲ್ಲವೆಂದು ಗಮನಕ್ಕೆ ತಂದಿದ್ದಾರೆ.
ಆಗ ಮುಖ್ಯಮಂತ್ರಿ, ‘ಈಗಾಗಲೇ ತಲಾ ₹ 50 ಕೋಟಿ ಶಾಸಕ ನಿಧಿ ನೀಡಿದ್ದು, ಆ ಹಣದಲ್ಲಿ ಅಭಿವೃದ್ಧಿ ಕಾರ್ಯ ನಡೆಸಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.
ವೈದ್ಯಕೀಯ ಕಾಲೇಜು ನಿರ್ಮಾಣದ ಬಗ್ಗೆಯೂ ಪ್ರಸ್ತಾಪವಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ಮಾಣ ಮಾಡಲು ಈಗಾಗಲೇ ಘೋಷಿಸಿದ್ದು, ಅದು ಸಾಧ್ಯವಾಗದಿದ್ದರೆ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಾಗಿ ಮುಖ್ಯಮಂತ್ರಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಈ ವರೆಗೆ ನಡೆದಿರುವ ಅಭಿವೃದ್ಧಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಬಗ್ಗೆಯೂ ಹೇಳಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್, ಕೊತ್ತೂರು ಮಂಜುನಾಥ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.