ADVERTISEMENT

ಕೋಚ್‌ ಕಾರ್ಖಾನೆ: ಹೋರಾಟದ ಎಚ್ಚರಿಕೆ

ಕೇಂದ್ರದ ಏಕಪಕ್ಷೀಯ ನಿರ್ಧಾರ: ಮಾಜಿ ಸಂಸದ ಮುನಿಯಪ್ಪ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 11:37 IST
Last Updated 8 ಫೆಬ್ರುವರಿ 2020, 11:37 IST
ಕೆ.ಎಚ್‌.ಮುನಿಯಪ್ಪ
ಕೆ.ಎಚ್‌.ಮುನಿಯಪ್ಪ   

ಕೋಲಾರ: ‘ಜಿಲ್ಲೆಯಲ್ಲಿ ರೈಲು ಕೋಚ್‌ ಕಾರ್ಖಾನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ರೈಲು ಕೋಚ್‌ ಕಾರ್ಖಾನೆ ನಿರ್ಮಾಣ ಕೈಬಿಟ್ಟು ರೈಲು ವರ್ಕ್‌ಶಾಪ್‌ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರವು ಏಕಪಕ್ಷೀಯ ನಿರ್ಧಾರ ಕೈಗೊಂಡು ಹಿಂದಿನ ಸರ್ಕಾರದ ಯೋಜನೆ ಮೂಲೆಗುಂಪು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಶ್ರೀನಿವಾಸಪುರ ಬಳಿ ಕೋಚ್ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಕಾರ್ಖಾನೆಗೆ 1,200 ಎಕರೆ ಜಾಗ ಅಗತ್ಯವಿದ್ದು, ಸದ್ಯ 500 ಎಕರೆ ಸರ್ಕಾರಿ ಜಾಗ ಲಭ್ಯವಿದೆ. ಉಳಿದ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆದಿತ್ತು. ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಶೇ 50 ಮತ್ತು ರಾಜ್ಯ ಸರ್ಕಾರ ಶೇ 50ರಷ್ಟು ಅನುದಾನ ಮೀಸಲಿಡಲು ಒಪ್ಪಂದವಾಗಿತ್ತು’ ಎಂದು ಹೇಳಿದರು.

ADVERTISEMENT

‘ರಾಜಕಾರಣ ನಿಂತ ನೀರಲ್ಲ ಮತ್ತು ಸರ್ಕಾರ ಒಂದೇ ರೀತಿ ಇರುವುದಿಲ್ಲ. ಮುಂದೆ ಒಳ್ಳೆಯ ದಿನ ಬರುತ್ತವೆ. ಆಗ ಸರ್ಕಾರ ಬದಲಾಗಿ ಖಂಡಿತ ಕೋಚ್ ಕಾರ್ಖಾನೆ ಸ್ಥಾಪನೆ ಆಗುತ್ತದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕೋಚ್‌ ಕಾರ್ಖಾನೆ ಸ್ಥಾಪನೆ ಉದ್ದೇಶ ಮರೆತು ತೀರ್ಮಾನ ಕೈಗೊಂಡಿದೆ’ ಎಂದು ಕಿಡಿಕಾರಿದರು.

ರದ್ದು ಸಾಧ್ಯವಿಲ್ಲ

‘ಯಾವುದೇ ಯೋಜನೆಗೆ ಸದನದಲ್ಲಿ ಒಮ್ಮೆ ಅನುಮೋದನೆ ಸಿಕ್ಕಿದ ನಂತರ ಯೋಜನೆ ರದ್ದುಗೊಳಿಸಲು ಸಾಧ್ಯವಿಲ್ಲ. ಕೋಚ್‌ ಕಾರ್ಖಾನೆಯ ಮತ್ತೊಂದು ಭಾಗ ವರ್ಕ್‌ಶಾಪ್. ಆದಷ್ಟೂ ಬೇಗನೆ ಯೋಜನೆ ಅನುಷ್ಠಾನಕ್ಕೆ ತರಲು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಕೇಂದ್ರದ ಬಜೆಟ್‌ ನಿರಾಸೆ ಮೂಡಿಸಿದೆ. ವರ್ಕ್‌ಶಾಪ್‌ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ₹ 2 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ 500 ರೈಲು ಬೋಗಿ ಉತ್ಪಾದನಾ ಸಾಮರ್ಥ್ಯದ ಕೋಚ್‌ ಕಾರ್ಖಾನೆ ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. ಆಗ ರಾಜ್ಯದಲ್ಲಿದ್ದ ಡಿ.ವಿ.ಸದಾನಂದಗೌಡರ ನೇತೃತ್ವದ ಬಿಜೆಪಿ ಸರ್ಕಾರವು ಭೂಮಿ ಸ್ವಾಧೀನಪಡಿಸಿಕೊಂಡು ಯೋಜನೆ ಆರಂಭಿಸಿತ್ತು’ ಎಂದು ಮಾಹಿತಿ ನೀಡಿದರು.

ಒತ್ತಡ ತರುತ್ತೇನೆ

‘ನಾನು ಕೇಂದ್ರ ಸಚಿವನಾಗಿದ್ದಾಗ ಜಿಲ್ಲೆಗೆ ಕೈಗಾರಿಕೆ ಹಾಗೂ ರೈಲು ಮಾರ್ಗ ಮಂಜೂರು ಮಾಡಿಸಿದ್ದೇನೆ. ೨೦೧೪ರಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಕೋಚ್‌ ಕಾರ್ಖಾನೆ ಕಾಮಗಾರಿ ನಿರ್ಲಕ್ಷಿಸಿತು. ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಬೆಂಬಲ ನೀಡಿದ್ದಾರೆ. ನಾನು ರೈಲ್ವೆ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿಯಾಗಿದ್ದು, ಸಚಿವರು ಕೋಚ್ ಕಾರ್ಖಾನೆ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಮ್ಮೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತೇನೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಉಪಾಧ್ಯಕ್ಷರಾದ ಎಲ್.ಎ.ಮಂಜುನಾಥ್, ಮುರಳಿಗೌಡ, ನಗರಸಭೆ ಸದಸ್ಯರಾದ ಬಿ.ಎಂ.ಮುಬಾರಕ್, ಪ್ರಸಾದ್‌ಬಾಬು, ಮಾಜಿ ಸದಸ್ಯ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.