ADVERTISEMENT

ಸಮಿತಿ ಶಿಫಾರಸು: ಬೆಂಗಳೂರು ಉತ್ತರ ವಿ.ವಿ ಪತ್ರಿಕೋದ್ಯಮ ವಿಭಾಗ ಬಂದ್

ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಅನುಮೋದನೆ: ಕುಲಪತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 20:45 IST
Last Updated 23 ಜುಲೈ 2025, 20:45 IST
ಪ್ರೊ.ನಿರಂಜನ ವಾನಳ್ಳಿ
ಪ್ರೊ.ನಿರಂಜನ ವಾನಳ್ಳಿ   

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರನ್ನು ಒಳಗೊಂಡ ಸಮಿತಿ ಶಿಫಾರಸ್ಸಿನಂತೆ ಪತ್ರಿಕೋದ್ಯಮ ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಸ್ಪಷ್ಟಪಡಿಸಿದ್ದಾರೆ.

‘ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ. ಐವರು ಅತಿಥಿ ಉಪನ್ಯಾಸಕರಿದ್ದಾರೆ. 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದು ಪರೀಕ್ಷೆ ಹೊತ್ತಿಗೆ ಅವರೂ ಗೈರಾಗುತ್ತಿರುವ ವಿಷಯ ವಿಶ್ವವಿದ್ಯಾಲಯ ಗಮನಕ್ಕೆ ಬಂದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಅಂತಿಮ ಸೆಮಿಸ್ಟರ್‌ನಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ತರಗತಿಗೆ ಹಾಜರಾದರೂ ತರಗತಿ ನಡೆಸಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ, ಇದೀಗ ವಿದ್ಯಾರ್ಥಿಗಳಿಗೆ ಬೇಕಿಲ್ಲದ ವಿಭಾಗವನ್ನು ಮುಚ್ಚುವುದು ಅನಿವಾರ್ಯವಾಗಿದೆ’ ಎಂದಿದ್ದಾರೆ.

ADVERTISEMENT

‘ಕೋರ್ಸ್‌ ಮುಚ್ಚಲು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ಸಮಿತಿ ರಚಿಸಿ ಅದರ ಶಿಫಾರಸ್ಸಿನಂತೆ ಈ ಶೈಕ್ಷಣಿಕ ಸಾಲಿನಲ್ಲಿ ಮುಂದುವರಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ‌ವಿದ್ಯಾ
ವಿಷಯಕ ಪರಿಷತ್ ಮತ್ತು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಕೂಡ ಪಡೆಯ
ಲಾಗಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದಿದ್ದಾರೆ.

‘ವಿಶ್ವವಿದ್ಯಾಲಯ ಸ್ವಾಯುತ್ತ ಸಂಸ್ಥೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆಯಡಿ 2000ರ 34 (4)ನೇ ವಿಧಿಯ ಪ್ರಕಾರ ಯಾವುದೇ ಅಧ್ಯಯನ ವಿಭಾಗವನ್ನು ರದ್ದುಪಡಿಸುವ ಹಕ್ಕು ಹೊಂದಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಪ್ರಜ್ಞಾಪೂರ್ವಕವಾಗಿಯೇ ಈ ಕ್ರಮ ಕೈಗೊಂಡಿದೆ. ನಿರಂತರವಾಗಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಈ ವಿಭಾಗವನ್ನು ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿದ್ದಾರೆ.

ಪತ್ರಿಕೋದ್ಯಮ ವಿಭಾಗ ಮುಚ್ಚಲು ವಿದ್ಯಾರ್ಥಿಗಳ ಕೊರತೆಯೇ ಕಾರಣ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಕೂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ಉತ್ತರ ವಿ.ವಿ ಪತ್ರಿಕೋದ್ಯಮ ವಿಭಾಗ ಬಂದ್‌’ ಎಂಬ ವಿಶೇಷ ವರದಿ ಜುಲೈ 21ರಂದು ‘ಪ್ರಜಾವಾಣಿ’
ಯಲ್ಲಿ ಪ್ರಕಟವಾಗಿತ್ತು. ಆ ಬಳಿಕ ಪರ ವಿರೋಧ ಚರ್ಚೆಗಳು ನಡೆದಿದ್ದವು. ಹೀಗಾಗಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

- ‘ಪ್ರಜಾವಾಣಿ’ ವರದಿ ಬಳಿಕ ಪರ ವಿರೋಧ ಚರ್ಚೆ ದಾಖಲಾತಿ ಕೊರತೆ ಮುಖ್ಯ ಕಾರಣ: ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.