ಕೆಜಿಎಫ್: ತಾಲ್ಲೂಕಿನ ಕಂಗಾನಲ್ಲೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ಗ್ರಾಮಸ್ಥರ ದೂರಿನ ಬಗ್ಗೆ ಸ್ಥಳ ತನಿಖೆ ಮಾಡಿ ಮಾಹಿತಿ ನೀಡುವಂತೆ ಶಾಸಕಿ ಎಂ. ರೂಪಕಲಾ ಅವರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಿದರು.
ಗ್ರಾಮದಲ್ಲಿ ಬುಧವಾರ ₹ 30 ಲಕ್ಷ ಅನುದಾನದಲ್ಲಿ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಯ ಬಳಿಕ ಅವರುಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು.
18 ಮಕ್ಕಳ ಪೈಕಿ ಕೇವಲ 4 ಮಕ್ಕಳು ಹಾಜರಾಗಿದ್ದರು. ನಿಗದಿತ ಸಮಯ ಮೀರಿದ್ದರೂ ಕಾರ್ಯಕರ್ತೆ ಅಂಗನವಾಡಿಗೆ ಬಂದಿರಲಿಲ್ಲ. ಈ ಸಂಬಂಧ ಗ್ರಾಮಸ್ಥರನ್ನು ಶಾಸಕಿ ವಿಚಾರಿಸಿದಾಗ, ಕಾರ್ಯಕರ್ತೆಯ ಕಾರ್ಯವೈಖರಿ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಮೊಬೈಲ್ ಮೂಲಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಸಂಪರ್ಕಿಸಿದ ಶಾಸಕಿ, ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಬೇಕು. ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳದ ಗುರುತು ಹಾಕಿಕೊಡಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.