ADVERTISEMENT

ಪಟ್ಟಣ ಪಂಚಾಯಿತಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಿ: ಸರ್ಕಾರಕ್ಕ ಸುದರ್ಶನ್ ಆಗ್ರಹ

ವಿಧಾನ ಪರಿಷತ್‌ ಮಾಜಿ ಸಭಾಪತಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 14:21 IST
Last Updated 17 ಆಗಸ್ಟ್ 2021, 14:21 IST
ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೋಲಾರ: ‘ಸರ್ಕಾರವು ಹೈಕೋರ್ಟ್ ಆಡಳಿತಾತ್ಮಕವಾಗಿ ಸೂಚಿಸಿರುವ ವಿಷಯಗಳನ್ನು ಸರಿಪಡಿಸಿ ವೇಮಗಲ್ ಸುತ್ತಮುತ್ತಲಿನ 20 ಗ್ರಾಮಗಳ ಜನರ ಹಿತದೃಷ್ಟಿ ಪರಿಗಣಿಸಿ ತ್ವರಿತವಾಗಿ ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆ ಪ್ರಕ್ರಿಯೆ ಅಂತಿಮಗೊಳಿಸಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಆಗ್ರಹಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹೈಕೋರ್ಟ್ ಅಂತಿಮ ಅಧಿಸೂಚನೆಗೆ ತಡೆ ನೀಡಿ, ಆಕ್ಷೇಪಣೆಗಳ ಕುರಿತು ಪೌರಾಡಳಿತ ನಿರ್ದೇಶನಾಲಯವು ಸಾರ್ವಜನಿಕರನ್ನು ಕರೆಸಿ ಮಾತನಾಡಿಸಿಲ್ಲ ಎಂದು ಆಕ್ಷೇಪಿಸಿದೆ. ಸಂವಿಧಾನದ ತಿದ್ದುಪಡಿ 74ರ ಸೆಕ್ಷನ್ 9ರ ಪ್ರಕಾರ ಜಿಲ್ಲಾಧಿಕಾರಿ ಬದಲು ಪೌರಾಡಳಿತ ನಿರ್ದೇಶಕರು ಅಥವಾ ಸರ್ಕಾರದ ಹಂತದಲ್ಲಿ ಆಕ್ಷೇಪ ಪರಿಶೀಲಿಸಬೇಕು’ ಎಂದರು.

‘ಹೈಕೋರ್ಟ್‌ ಪಟ್ಟಣ ಪಂಚಾಯಿತಿ ರಚನೆಯ ಪ್ರಾಥಮಿಕ ಆದೇಶ ರದ್ದುಪಡಿಸಿಲ್ಲ. ಸರ್ಕಾರ ಕೂಡಲೇ ಹೈಕೋರ್ಟ್ ಆಕ್ಷೇಪಗಳ ಕುರಿತು ಗಮನಹರಿಸಿ ಪಟ್ಟಣ ಪಂಚಾಯಿತಿ ರಚನೆಗೆ ಇರುವ ತೊಡಕು ನಿವಾರಿಸಬೇಕು. ಪಟ್ಟಣ ಪಂಚಾಯಿತಿಗೆ ನೇಮಕವಾಗಿರುವ ಸಿಬ್ಬಂದಿಗೆ 5 ತಿಂಗಳಿಂದ ಸಂಬಳವಿಲ್ಲ. ಇಲಾಖೆ, ಸರ್ಕಾರ ಜನರ ಸಮಸ್ಯೆ ಬಗೆಹರಿಸಬೇಕು’ ಎಂದು ಕೋರಿದರು.

ADVERTISEMENT

‘ವೇಮಗಲ್‌ ಕೈಗಾರಿಕಾ ಪ್ರದೇಶವಾಗಿದೆ. ಪಟ್ಟಣ ಪಂಚಾಯಿತಿ ಹಸುಗೂಸು ಹುಟ್ಟಿದೆ. ಇದಕ್ಕೆ ನಾಮಕರಣವೂ ಆಗಿದೆ. ಈಗ ಕತ್ತು ಹಿಸುಕುವ ಕೆಲಸ ಬೇಡ. ಕಂದಾಯ ಇಲಾಖೆ, ಆಸ್ಪತ್ರೆ, ಶಾಲೆ, ಪೊಲೀಸ್ ಠಾಣೆ, ಬ್ಯಾಂಕ್, ಅಂಚೆ ಕಚೇರಿ ಮೇಲ್ದರ್ಜೆಗೆ ಏರಿದೆ. ಇದಕ್ಕೆ ವಿರೋಧವಿಲ್ಲ. ಗ್ರಾಮ ಪಂಚಾಯಿತಿ ಮೇಲ್ದರ್ಜೆಗೆ ಏರಿದರೆ ಏಕೆ ವಿರೋಧ?’ ಎಂದು ಪ್ರಶ್ನಿಸಿದರು.

ತಪ್ಪು ಮಾಹಿತಿ: ‘ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿರುವವರ ಪರ ವಕೀಲರು ತಪ್ಪು ಮಾಹಿತಿ ನೀಡಿದ್ದಾರೆ. ವೇಮಗಲ್‌ನಲ್ಲಿ ಪದವಿ ಕಾಲೇಜಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಇಲ್ಲಿ ಪದವಿ ಕಾಲೇಜು ಇದೆ. ಈ ವರ್ಷದಿಂದ ಸ್ನಾತಕೋತ್ತರ ಪದವಿ ತರಗತಿಯೂ ಆರಂಭವಾಗುತ್ತಿದೆ. ಕುರಗಲ್-ವೇಮಗಲ್‌ಗೆ ಬಸ್ಸಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಇದು ರಾಜ್ಯ ಹೆದ್ದಾರಿಯಾಗಿದೆ. 15 ನಿಮಿಷಕ್ಕೊಂದು ಬಸ್‌ ಸಂಚರಿಸುತ್ತದೆ’ ಎಂದರು.

‘ಪಟ್ಟಣ ಪಂಚಾಯಿತಿಯಾದರೆ ಆಸ್ತಿ ತೆರಿಗೆ, ಕೈಗಾರಿಕಾ ತೆರಿಗೆ ಸೂಕ್ತ ರೀತಿಯಲ್ಲಿ ಹಂಚಿಕೆಯಾಗಲಿದೆ. 20 ಹಳ್ಳಿಗಳಿಗೂ ಇದು ಸಮನಾಗಿ ಹಂಚಿಕೆಯಾಗಲಿದೆ. ನರೇಗಾ ಹೋಗುತ್ತೆ ಎನ್ನುವ ಆತಂಕ ಕೆಲವರದ್ದು. ಆದರೆ, ಇಂತಹ ಹತ್ತಾರು ಕಾರ್ಯಕ್ರಮ ಬರಲಿವೆ. ನರೇಗಾ ಮಾದರಿಯಲ್ಲಿ ನಗರಾಭಿವೃದ್ಧಿಗೆ ಯೋಜನೆ ಜಾರಿ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದೆ’ ಎಂದು ವಿವರಿಸಿದರು.

‘ಪಟ್ಟಣ ಪಂಚಾಯಿತಿ ರಚನೆಯಿಂದ ಕೃಷಿ, ಹೈನುಗಾರಿಕೆಗೆ ತೊಂದರೆಯಿಲ್ಲ. ಕುಡಿಯುವ ನೀರು ಸರಬರಾಜು ಜಲಮಂಡಳಿ ವ್ಯಾಪ್ತಿಗೆ ಬರಲಿದೆ. ಕೋಲಾರ ವ್ಯಾಪ್ತಿಯಲ್ಲಿ ಟಮಕ ಗ್ರಾ.ಪಂ ಸೇರಿ ನಗರಸಭೆಯಾಗಿದೆ. ಮುಂದೆ ಕೋಲಾರ ಮಹಾನಗರಪಾಲಿಕೆ ಆಗಬಹುದು. ಸ್ನೇಹಿತರು ಆತಂಕದಿಂದ ಪಿಎಲ್‍ಐ ಹಾಕಿರಬಹುದು. ಅದು ಅವರ ಹಕ್ಕು. ಪಟ್ಟಣ ಪಂಚಾಯಿತಿ ರಚನೆ ಹಿಂದೆ ಪಕ್ಷಾತೀತವಾಗಿ ಹಲವರ ಪ್ರಯತ್ನವಿದೆ’ ಎಂದು ಹೇಳಿದರು.

ಮೈಸೂರು ಮಿನರಲ್ಸ್ ನಿರ್ದೇಶಕ ಆರ್.ಕಿಶೋರ್‌ಕುಮಾರ್‌, ನಿವೃತ್ತ ತಹಶೀಲ್ದಾರ್ ಮುನಿಯಪ್ಪ, ವೇಮಗಲ್ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.