ADVERTISEMENT

2023ರ ಚುನಾವಣೆಯಲ್ಲಿ ಸಿಎಂಆರ್‌ ₹ 60 ಕೋಟಿ ಕಳೆದುಕೊಂಡರು: ವರ್ತೂರು ಪ್ರಕಾಶ್‌

‘2023ರ ಚುನಾವಣೆಯಲ್ಲಿ ಜೆಡಿಎಸ್‌ನ ಸಿಎಂಆರ್‌ ಶ್ರೀನಾಥ್‌ ದುಡ್ಡು, ಕಾಂಗ್ರೆಸ್‌ಗೆ ವೋಟು’

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:34 IST
Last Updated 5 ಜನವರಿ 2026, 7:34 IST
ಕೋಲಾರ ತಾಲ್ಲೂಕಿನ ದೊಡ್ಡಹಸಾಳದಲ್ಲಿ ಭಾನುವಾರ ನಡೆದ ಎನ್‍ಡಿಎ ಸಭೆಗೆ ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್ ಹಾಗೂ ಬಿಜೆಪಿ ಮುಖಂಡ ವರ್ತೂರ್ ಪ್ರಕಾಶ್ ಚಾಲನೆ ನೀಡಿದರು
ಕೋಲಾರ ತಾಲ್ಲೂಕಿನ ದೊಡ್ಡಹಸಾಳದಲ್ಲಿ ಭಾನುವಾರ ನಡೆದ ಎನ್‍ಡಿಎ ಸಭೆಗೆ ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್ ಹಾಗೂ ಬಿಜೆಪಿ ಮುಖಂಡ ವರ್ತೂರ್ ಪ್ರಕಾಶ್ ಚಾಲನೆ ನೀಡಿದರು   

ಕೋಲಾರ: 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಕಾಂಗ್ರೆಸ್‌ ನೀಡಿದ ಉಚಿತ ಆಮಿಷಗಳಿಂದಾಗಿ ಕೋಲಾರ ಕ್ಷೇತ್ರದಲ್ಲಿ ನಾನು ಹಾಗೂ ಸಿಎಂಆರ್‌ ಶ್ರೀನಾಥ್‌ ತಲೆ ಮೇಲೆ ಮಣ್ಣು ಸುರಿದುಕೊಂಡೆವು. ನನ್ನನ್ನು ಬಿಟ್ಟಾಕಿ. ಸಿಎಂಆರ್‌ ಶ್ರೀನಾಥ್ ಅಣ್ಣತಮ್ಮಂದಿರು ಕಷ್ಟಪಟ್ಟು ಸಂಪಾದನೆ ಮಾಡಿದ, ಟೊಮೆಟೊ ಹರಾಜು ಹಾಕಿ ದುಡಿದ ₹ 60 ಕೋಟಿ ಹಣ ಕಳೆದುಕೊಂಡು ಎಲ್ಲವನ್ನೂ ಹಾಳು ಮಾಡಿಕೊಂಡರು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ವರ್ತೂರು ಆರ್‌.ಪ್ರಕಾಶ್‌ ಹೇಳಿದರು.

ತಾಲ್ಲೂಕಿನ ದೊಡ್ಡಹಸಾಳದ ಗ್ರಾಮ ಪಂಚಾಯಿತಿ ಆವರಣದಲ್ಲಿ ಭಾನುವಾರ ಬಿಜೆಪಿ ಹಾಗೂ ಜೆಡಿಎಸ್‌ ಜಂಟಿಯಾಗಿ ಆಯೋಜಿಸಿದ್ದ ಎನ್‍ಡಿಎ ಕಾರ್ಯಕರ್ತರ ಪಂಚಾಯಿತಿ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಆ ಚುನಾವಣೆಯು ಜೆಡಿಎಸ್‌ನ ಸಿಎಂಆರ್‌ ಶ್ರೀನಾಥ್‌ ದುಡ್ಡು, ಕಾಂಗ್ರೆಸ್‌ಗೆ ವೋಟು ಎಂದಾಯಿತು. ಈಗಲೂ ನಮ್ಮಿಬ್ಬರ ಹೊಟ್ಟೆಯಲ್ಲಿ ಬೆಂಕಿ ಉರಿಯುತ್ತಿದೆ. ಸಿಎಂಆರ್‌ ಏನು ಬಡಾವಣೆ ಮಾಡಿಕೊಂಡು ಕೋಟಿ ಹೊಡೆದಿದ್ದಾರೆಯೇ? ನಿವೇಶನ ಮಾರಾಟ ಮಾಡಿದ್ದಾರೆಯೇ? ರಿಯಲ್‌ ಎಸ್ಟೇಟ್‌ ಮಾಡುತ್ತಿದ್ದಾರೆಯೇ? ಯಾರ ಮನೆ ದುಡ್ಡು? ಕಷ್ಟಪಟ್ಟು ದುಡಿದ ದುಡ್ಡು ಹೋಯಿತು. ಅವರಾದರೂ ಗೆದ್ದಿದ್ದರೆ ನನಗೆ ಸಮಾಧಾನ ಆಗುತಿತ್ತು ಎಂದರು.

ADVERTISEMENT

ರಾಜಕೀಯ ವಿರೋಧಿಗಳಿಗೆ ನಡುಕ ಹುಟ್ಟಿಸುವ ಮಟ್ಟಿಗೆ ಎನ್‍ಡಿಎ ಮೈತ್ರಿಕೂಟದ ಸಂಘಟನೆ ನಡೆಯಬೇಕಿದ್ದು, ಮುಂದೆ ಬರುವ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬಂಡಾಯ ಸ್ಪರ್ಧೆ ಇಲ್ಲದಂತೆ ಒಗ್ಗಟ್ಟು ಕಾಪಾಡಬೇಕು ಎಂದು ಹೇಳಿದರು.

ಚುನಾವಣೆಗಳಲ್ಲಿ ಸೀಟು ಹಂಚುವುದು ನಮ್ಮಿಬ್ಬರ ಕೈಯಲ್ಲಿ ಇಲ್ಲ. ದೆಹಲಿಯಲ್ಲಿ ಹೈಕಮಾಂಡ್‌ ತೀರ್ಮಾನಿಸುತ್ತದೆ. ಜೆಡಿಎಸ್‌ಗೆ ಇಷ್ಟು, ಬಿಜೆಪಿಗೆ ಇಷ್ಟು ಎಂದು ನಿರ್ಧಾರ ಮಾಡುತ್ತಾರೆ ಎಂದರು.

ಗ್ರಾಮ ಪಂಚಾಯಿತಿ, ತಾಲ್ಲೂಕು. ಜಿಲ್ಲೆ ಪಂಚಾಯಿತಿ ಮತ್ತು ನಗರಸಭೆಗಳಲ್ಲಿ ಮೈತ್ರಿಕೂಟದ ಬಾವುಟ ಹಾರಿಸಬೇಕು. ಇದಕ್ಕಾಗಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಸಂಘಟನೆ ಮಾಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಮಾತನಾಡಿ, ಹಿಂದಿನ ಲೋಕಸಭಾ ಚುನಾವಣೆ ಮಾದರಿಯಲ್ಲಿ 2028ಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಖಚಿತವಾಗಿ ಆಡಳಿತಕ್ಕೆ ಬರಲಿದೆ. ಉತ್ತಮ ಆಡಳಿತ ನೀಡುತ್ತೇವೆ ಎಂದರು.

ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ, ‘ಎರಡೂ ಪಕ್ಷಗಳ ಮುಖಂಡರು ಹೋರಾಟ ಮಾಡಿದರೆ ಮಾತ್ರ ಜನ ಸ್ಪಂದಿಸುತ್ತಾರೆ. ತಾಲ್ಲೂಕು ಕಚೇರಿ ಸೇರಿದಂತೆ ವಿವಿಧೆಡೆ ಬಹಳಷ್ಟು ಸಮಸ್ಯೆಗಳಿವೆ. ಮುಂದಾದರೂ ಈ ಸಂಬಂಧ ಮುಖಂಡರು ಜೊತೆಗೂಡಿ ಹೋರಾಟ‌ ನಡೆಸಬೇಕು’ ಎಂದು ಮನವಿ ಮಾಡಿದರು.

ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು ವೈಮನಸ್ಯ, ಸ್ವಾರ್ಥ ಬಿಟ್ಟುಬಿಡಿ. ವಾರ್ಡ್‌ವಾರು ಸಭೆ ನಡೆಸಿ. ಎಲ್ಲಾ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಮಾತನಾಡಿ, ‘ಸಾವಿರ ವೈಷಮ್ಯ ಇದ್ದರೂ ಮುಂಬರುವ ಚುನಾವಣೆಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎರಡೂ ಪಕ್ಷಗಳ ‌ಮುಖಂಡರು ಕುಳಿತು ಸಮಾನಾಗಿ ಸೀಟು ಹಂಚಿಕೊಳ್ಳಬೇಕು‌’ ಎಂದರು.

ಮುಖಂಡರಾದ ಸಿ.ಡಿ.ರಾಮಚಂದ್ರ, ಬಂಕ್ ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣ್ ಪ್ರಸಾದ್, ಕುರುಬರ ಸಂಘದ ತಂಬಳ್ಳಿ ಮುನಿಯಪ್ಪ, ಎರಡೂ ಪಕ್ಷಗಳ ಕಾರ್ಯಕರ್ತರು ಇದ್ದರು.

ಜಿಲ್ಲೆಯ ಕಚೇರಿಗಳಲ್ಲಿ ಲಂಚ

ಲಂಚ ಜಿಲ್ಲೆಯಲ್ಲಿ ಕಂದಾಯ ಶಿಕ್ಷಣ ಇಲಾಖೆ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ತಾಂಡವಾಡುತ್ತಿದೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಆರೋಪಿಸಿದರು. ಶಕ್ತಿ ಯೋಜನೆಯಿಂದಾಗಿ ಹಳ್ಳಿಗಳಲ್ಲಿ ಬಸ್ಸುಗಳು ಇಲ್ಲದೆ ಜನ ಪರದಾಡುತ್ತಿದ್ದಾರೆ. ನೀರು‌ ರಸ್ತೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ‌. ಕಾಂಗ್ರೆಸ್‌ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಹೀಗಾಗಿ ಎನ್‍ಡಿಎ ಕಾರ್ಯಕರ್ತರು ಸಣ್ಣ ಪುಟ್ಟ ವೈಮನಸ್ಯ ಬದಿಗಿಟ್ಟು ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮುಸ್ಲಿಮರಿಗೆ ಹಣ ಕೊಟ್ಟು ಕಳೆದುಕೊಂಡರು

2023ರ ವಿಧಾನಸಭೆ ಚುನಾವಣೆಯ ಕೊನೆ ದಿನ ಸಿಎಂಆರ್‌ ಶ್ರೀನಾಥ್‌ ₹ 4 ಕೋಟಿಯನ್ನು ಬಡ್ಡಿಗೆ ಸಾಲ ತಂದು ಮುಸ್ಲಿಮರಿಗೆ ಹಂಚಿದರು. ಮುಸ್ಲಿಮರಿಗೆ ಹಣ ಕೊಟ್ಟು ಕೊಟ್ಟು ಎಲ್ಲಾ ಕಳೆದುಕೊಂಡರು ಎಂದು ವರ್ತೂರು ‍ಪ್ರಕಾಶ್‌ ತಿಳಿಸಿದರು. ಕೇವಲ 20 ದಿನಗಳಲ್ಲಿ ಪ್ರಚಾರ ನಡೆಸಿ ಗೆದ್ದು ವಿಧಾನಸಭೆಗೆ ಹೋಗಬೇಕೆಂದು ಕೊತ್ತೂರು ಮಂಜುನಾಥ್‌ ಹಣೆಯಲ್ಲಿ ಬರೆದಿತ್ತು ಗೆದ್ದರು. ರಾಮಸಂದ್ರ ಗಡಿಯಲ್ಲಿ ಅವರು ಕಾರು ಬೈಕು ನಿಲ್ಲಿಸಿದ್ದಾರೆಂದು ನಂಬಿ ಯುವಕರು ಕಾಂಗ್ರೆಸ್‌ಗೆ ವೋಟು ಹಾಕಿದರು‌. ಉಚಿತ ಅಕ್ಕಿ ₹ 2 ಸಾವಿರ ಹಣಕ್ಕಾಗಿ ‌ಮಹಿಳೆಯರು ಆ ಪಕ್ಷಕ್ಕೆ ವೋಟು ಹಾಕಿದರು ಎಂದರು.

ಕಾಂಗ್ರೆಸ್‌ ಕುರ್ಚಿ ಕಾದಾಟ; ಅಭಿವೃದ್ಧಿ ಶೂನ್ಯ

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಯ ಕುರ್ಚಿ ಕಾದಾಟದಲ್ಲಿ ಕೋಲಾರ ಸೇರಿದಂತೆ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್ ವಾಗ್ದಾಳಿ ನಡೆಸಿದರು. ರಾಜ್ಯ ಬಜೆಟ್‍ನಲ್ಲಿ ಕೋಲಾರಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಘೋಷಿಸಿದ್ದರು. ಆದರೆ ಈಗ ಅದನ್ನೂ ಮರೆತಿದ್ದಾರೆ. ಉಸ್ತುವಾರಿ ಸಚಿವರು ಧ್ವಜಾರೋಹಣಕ್ಕೆ ಸೀಮಿತರಾಗಿದ್ದಾರೆ. ಕಾಟಾಚಾರಕ್ಕೆ ಎಂಬಂತೆ ಸಭೆ ನಡೆಸಿ ಹೋಗುತ್ತಾರೆ. ಸಭೆಯ ಪರಿಣಾಮ ಏನಾಯಿತು ಎಂಬುದನ್ನು ನೋಡುತ್ತಿಲ್ಲ ಎಂದು ಟೀಕಿಸಿದರು.