ADVERTISEMENT

ಕೋಲಾರ | ಕಾಂಗ್ರೆಸ್ ಸರ್ಕಾರದಿಂದ ಅನುದಾನ ತಾರತಮ್ಯ: ಜೆಡಿಎಸ್ ಶಾಸಕರ ಆಕ್ರೋಶ

ಮತ್ತಷ್ಟು ಶಾಸಕರು ನ್ಯಾಯಾಲಯ ಮೊರೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:08 IST
Last Updated 24 ನವೆಂಬರ್ 2025, 6:08 IST
ಜೆಡಿಎಸ್ ಚಿಹ್ನೆ
ಜೆಡಿಎಸ್ ಚಿಹ್ನೆ   

ಕೋಲಾರ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಅನುದಾನ ತಾರತಮ್ಯ ವಿಚಾರವಾಗಿ ಈಗಾಗಲೇ ನಮ್ಮ ಪಕ್ಷದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನ್ಯಾಯಾಲಯ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್‌ನ ಎಲ್ಲಾ ಶಾಸಕರಿಗೂ ಪರಿಹಾರ ಸಿಗುವಂತಾಗುತ್ತದೆ ಎಂದು ಮುಳಬಾಗಿಲಿನ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.

ತಾಲ್ಲೂಕಿನ ಕಾಮದೇನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡುವುದರಲ್ಲಿ ಸ್ಪಷ್ಟವಾಗಿ ತಾರತಮ್ಯ ಮಾಡುತ್ತಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮೈತ್ರಿ ಪಕ್ಷದ ಎಲ್ಲಾ ಶಾಸಕರೂ ಈ ವಿಷಯವನ್ನು ಗಂಭೀರವಾಗಿ ಎತ್ತಿಕೊಳ್ಳಲಿದ್ದೇವೆ. ಪರಿಹಾರ ಸಿಗದಿದ್ದರೆ ಮತ್ತಷ್ಟು ಶಾಸಕರು ನ್ಯಾಯಾಲಯದ ಮೊರೆ ಹೋಗಲು ಸಿದ್ಧರಾಗಿದ್ದೇವೆ’ ಎಂದರು.

ಕಾಂಗ್ರೆಸ್ ಶಾಸಕರಿಗೆ ₹ 25 ಕೋಟಿ ನೀಡಿದ್ದಾಗ ನಮಗೆ ₹ 10 ಕೋಟಿ ಘೋಷಿಸಿದ್ದರು. ನಂತರ ಅವರಿಗೆ ₹ 50 ಕೋಟಿ ಅನುದಾನ ನೀಡಿದಾಗ ನಮಗೆ ಕೇವಲ ಲ₹ 25 ಕೋಟಿ ಘೋಷಿಸಿದ್ದಾರೆ. ಎಲ್ಲವೂ ಕೇವಲ ಕಾಗದಕ್ಕೆ ಮಾತ್ರ ಸೀಮಿತಾಗಿದ್ದು,ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಅನುದಾನ ಕೊಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು. ಈಗ ನಾವು ಕೂಡ ಅವರದ್ದೇ ಮಾರ್ಗದಲ್ಲಿ ನಡೆದಿದ್ದೇವೆ. ಅನುದಾನಕ್ಕಾಗಿ ನ್ಯಾಯಾಲಯಕ್ಕೆ ಹೋಗುವುದನ್ನು ಅವರೇ ಕಲಿಸಿದ್ದು ಎಂದು ತಿಳಿಸಿದರು.

ತಾವು ಸಲ್ಲಿಸಿರುವ ಅರ್ಜಿಯ ವಿಚಾರವಾಗಿ ನ್ಯಾಯಾಲಯದ ತೀರ್ಪು ಯಾವಾಗ ಬರಬಹುದು ಎಂಬ ಪ್ರಶ್ನೆಗೆ ಶಾಸಕ ವೆಂಕಟಶಿವಾರೆಡ್ಡಿ ಪ್ರತಿಕ್ರಿಯಿಸಿ, ‘ಇನ್ನು ಒಂದು ತಿಂಗಳೊಳಗೆ ತೀರ್ಪು ಬರಬಹುದು. ನಾನು ಹಾಕಿರುವ ಪ್ರಕರಣದಿಂದ ಎಲ್ಲ ಶಾಸಕರಿಗೂ ಸಮಾನ ಪರಿಹಾರ ಸಿಗಲಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲ ಅನುದಾನ ಪ್ರಕರಣಗಳಿಗೆ ಮಾದರಿಯಾಗಲಿದೆ’ ಎಂದು ಹೇಳಿದರು.

ಈಗಾಗಲೇ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ನೀಡುವ ಮೂಲಕ ವಿವರಣೆ ಕೋರಿದೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿದ್ದೇನೆ. ಆದರೆ, ರಾಜ್ಯ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಪುಂಗುಪುಂಡರಂತೆ ರಾಜಕಾರಣ: ಟೀಕೆ

ಮಾಲೂರು, ಕೋಲಾರ ಹಾಗೂ ಬಂಗಾರಪೇಟೆ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಅನುದಾನ ಬಂದಿರುವುದಾಗಿ ಅಲ್ಲಿನ ಶಾಸಕ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಸಮೃದ್ಧಿ ಮಂಜುನಾಥ್‌, ‘ಈ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಗೊತ್ತಾಗುತ್ತದೆ. ಪುಂಗುಪುಂಡರಂತೆ ರಾಜಕಾರಣ ಮಾಡುವವರಿಗೆ ನಾವು ಏನೂ ಹೇಳಲು ಆಗದು’ ಎಂದು ತಿರುಗೇಟು ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಸೇರಿಸಿ ಹೇಳುತ್ತಿರಬಹುದು. ಆ ರೀತಿ ಹೇಳುವುದಾದರೆ ನಮಗೂ ಸಾವಿರಾರು ಕೋಟಿ ಬಂದಿದೆ ಎಂದು ಹೇಳಬಹುದು. ಕೇಂದ್ರ ಸರ್ಕಾರ ಯಾವಾಗಲೂ ಸಮಾನವಾಗಿ ಅನುದಾನ ನೀಡಿದೆ. ಪಕ್ಷಾಧಾರಿತವಾಗಿ ತಾರತಮ್ಯ ಮಾಡಿಲ್ಲ. ಕೇಂದ್ರ ಸರ್ಕಾರದ ಅನುದಾನದಿಂದಲೇ ಜಿಲ್ಲೆಯಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ’ ಎಂದರು.

2028ರ ಚುನಾವಣೆಯಲ್ಲಿ ಸ್ಪರ್ಧೆ ಸುಳಿವು

‘ನನ್ನ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಕಳೆದ 45 ವರ್ಷಗಳಿಂದ ಐದು ಬಾರಿ ಶಾಸಕನಾಗಿದ್ದೇನೆ. ನನಗೆ ಏನಾಗಿದೆ? ಪರ್ಫೆಕ್ಟ್‌ ಆಗಿದ್ದೇನೆ. ಕಾಲಿನ ಆಪರೇಷನ್ ಆಗಿದ್ದು, ಒಂದಿಷ್ಟು ಕೆ.ಜಿ ತೂಕ ಇಳಿದಿದೆ’ ಎಂದು ಹೇಳುವ ಮೂಲಕ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂಬ ಸುಳಿವನ್ನು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.