ADVERTISEMENT

ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಮಸಿ ಬಳಿಯಲು ಕುತಂತ್ರ: ಕಾಂಗ್ರೆಸ್ ಮುಖಂಡರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:27 IST
Last Updated 23 ಡಿಸೆಂಬರ್ 2025, 6:27 IST
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರು ಮಾತನಾಡಿದರು
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರು ಮಾತನಾಡಿದರು   

ಕೋಲಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡರು ಈವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಬಾರದಂತೆ ಸ್ವಚ್ಛ, ಶುದ್ಧ ಆಡಳಿತ ನಡೆಸಿದ್ದು, ಅವರ ಏಳಿಗೆ ಸಹಿಸದೆ ಸುಳ್ಳು ಆರೋಪ ಮಾಡಿ ಮಸಿ ಬಳಿಯುವ ಕುತಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿನ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡ ಅನ್ವರ್‌ ಪಾಷ ಮಾತನಾಡಿ, ‘1953ರಲ್ಲಿ ಮೈಸೂರು ಮಹಾರಾಜರು ತಮ್ಮ ಹೆಸರಿನಲ್ಲಿದ್ದ ಜಮೀನನ್ನು ಗರುಡನಪಾಳ್ಯದ ಚೌಡೇಗೌಡರಿಗೆ ಭೋಗ್ಯಕ್ಕೆ ನೀಡಿದ್ದರು. ಭೂಮಿಯನ್ನು ನಂತರ ಖರೀದಿಗೆ ಇಟ್ಟಿದ್ದರು. ಹರಾಜಿನಲ್ಲಿ ಅದನ್ನು ಪಡೆಯಲು ₹ 2 ಸಾವಿರ ಮುಂಗಡ ನೀಡಿ ಕಾಲಾವಕಾಶ ಪಡೆದಿದ್ದರು. ನಿಗದಿತ ಅವಧಿಯಲ್ಲಿ ಪಡೆಯಲಾಗದ ಕಾರಣ ಗರುಡನಪಾಳ್ಯದ ಜಮೀನ‌ನ್ನು ಮಹರಾಜರು ಹಬೀಬ್ ಎಂಬುವರಿಗೆ ನೋಂದಣಿ ಮಾಡಿ ಕೊಟ್ಟಿದ್ದರು. ನಂತರ ರಾಜಿ ಸಂದಾನ ನಡೆದು ಜಮೀನಿನ ಮೌಲ್ಯದ ₹ 48 ಸಾವಿರ ಜೊತೆಗೆ ಹೆಚ್ಚುವರಿಯಾಗಿ ₹ 10 ಸಾವಿರ ನೀಡಿ ಚೌಡೇಗೌಡರು ನೊಂದಣಿ ಮಾಡಿಸಿ ಕೊಂಡಿದ್ದರು. ನಂತರ ಅವರ ಪುತ್ರ ಬೈರೇಗೌಡರು ವ್ಯಾಸಂಗ ಮುಗಿಸಿ ಗ್ರಾಮಕ್ಕೆ ಬಂದು ಕೃಷಿಯಲ್ಲಿ ತೊಡಗಿದರು. ಸಹೋದರರಾದ ಸೊಣ್ಣೇಗೌಡ ಮತ್ತು ಚನ್ನರಾಯಗೌಡರು ಕೈ ಜೋಡಿಸಿದ್ದರು’ ಎಂದರು.

ADVERTISEMENT

ಗರುಡನಪಾಳ್ಯದ ಆಸ್ತಿಗಳ ಪೈಕಿ ಕೆರೆ, ಸ್ಮಶಾನ, ಗುಂಡು ತೋಪು, ಗೋಕುಂಟೆ ಎಲ್ಲವೂ ಚೌಡೇಗೌಡರಿಗೆ ಸೇರಿದ್ದವು. 2 ಕೆರೆಗಳು, ಸ್ಮಶಾನದ ಸ್ವತ್ತುಗಳು ಇವರದೇ ಅಗಿದ್ದವು. ನೀರಾವರಿ ನಾಲೆಗಳು ಸಹ ಇವರಿಗೆ ಸೇರಿದ್ದವು. ಈ ಎಲ್ಲಾ ದಾಖಲೆಗಳನ್ನು ಸದನದಲ್ಲಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್ ಮುಖಂಡ ಶ್ರೀ‌ಕೃಷ್ಣ ಮಾತನಾಡಿ, ‘ಬೆಂಗಳೂರಿನ ಭೂಮಿ ದರಕ್ಕಿಂತ ನರಸಾಪುರ, ವೇಮಗಲ್, ಮಾಲೂರಿನಲ್ಲಿ ಹೆಚ್ಚುತ್ತಿದೆ. ಕೃಷ್ಣ ಬೈರೇಗೌಡರ ಕುಟುಂಬಕ್ಕೆ ಹೆಚ್ಚು ಭೂಮಿ ಇರುವುದು ಕಂಡು ಅವರನ್ನು ಮಟ್ಟ ಹಾಕಬೇಕೆಂಬ ಕುತಂತ್ರ ಹೂಡಲಾಗಿದೆ. ಅವರ ಏಳಿಗೆ ಸಹಿಸದೆ ವಿಪಕ್ಷ ನಾಯಕರಾದ ಆರ್.ಆಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ಯಾವುದೇ ದಾಖಲಾತಿಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರಳಿಲ್ಲ. ಇದರ ಸತ್ಯಸತ್ಯತೆಗಳನ್ನು ಅರಿಯಲು ತನಿಖೆಗೆ ಯಾವುದೇ ಖಾಸಗಿ ಸಂಸ್ಥೆ ನೇಮಿಸಲು ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಆರೋಪವು ರುಜುವಾತು ಮಾಡಿದರೆ ತಮಗೆ ಬಂದಿರುವ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟು ಕೊಡಲು ಸಿದ್ಧರಾಗಿರುವುದಾಗಿಯೂ ಘೋಷಿಸಿದ್ದಾರೆ. ಪುಕ್ಕಟೆ ಪ್ರಚಾರ ಪಡೆಯಲು ವಿಪಕ್ಷಗಳು ಆರೋಪ ಮಾಡುತ್ತಿವೆ’ ಎಂದು ವ್ಯಂಗವಾಡಿದರು,

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಇದಾಯುತುಲ್ಲಾ ಷರೀಷ್, ಮುಖಂಡರಾದ ಕೆ.ಎಂ.ಉಮಾಶಂಕರ್, ರವೀಂದ್ರ, ದೇವರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.