ADVERTISEMENT

ಮಾಲೂರು ಎಪಿಎಂಸಿ ಕಾಂಗ್ರೆಸ್‌ ಬೆಂಬಲಿತರ ಪಾಲು

ಎಪಿಎಂಸಿ ಅಧ್ಯಕ್ಷರಾಗಿ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷರಾಗಿ ಪಾರ್ಥಸಾರತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 3:06 IST
Last Updated 11 ಜೂನ್ 2020, 3:06 IST
ಮಾಲೂರು ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಮುಂಭಾಗ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ಮಾಲೂರು ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಮುಂಭಾಗ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು   

ಮಾಲೂರು: ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ್ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಪಾರ್ಥಸಾರಥಿ ಆಯ್ಕೆಯಾಗಿದ್ದಾರೆ.

ಇಲ್ಲಿನ ಎಪಿಎಂಸಿಗೆ ಮೂರನೆ ಅವದಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚಿಕ್ಕತಿರುಪತಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶ್ರೀನಿವಾಸ್ ರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಡತೂರು ಕೇತ್ರದಿಂದ ಆಯ್ಕೆಯಾಗಿದ್ದ ಪಾರ್ಥಸಾರತಿ ನಾಮಪತ್ರ ಸಲ್ಲಿಸಿದ್ದರು.

ಅದೇ ರೀತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಂತೇಹಳ್ಳಿ ಕ್ಷೇತ್ರದಿಂದ ಎಪಿಎಂಸಿಗೆ ಆಯ್ಕೆಯಾಗಿದ್ದ ಸುರೇಶ್ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ರೆಡ್ಡಿ 8 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಪಾರ್ಥ ಸಾರತಿ 8 ಮತಗಳನ್ನು ಪಡೆದರೇ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುರೇಶ್ 7 ಮತಗಳನ್ನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳ 7 ಮತಗಳನ್ನು ಪಡೆದರು. ಒಂದು ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಶ್ರೀನಿವಾಸ ರೆಡ್ಡಿ ಅಧ್ಯಕ್ಷರಾಗಿ ಹಾಗೂ ಪಾರ್ಥಸಾರತಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವುದಾಗಿ ಚುನಾವಣಾಧಿಕಾರಿ ತಹಶೀಲ್ದಾರ್ ಮಂಜುನಾಥ್ ಘೋಷಣೆ ಮಾಡಿದರು.

ಒಟ್ಟು 12 ಮಂದಿ ಚುನಾಯಿತಿ ಸದಸ್ಯರು ಹಾಗೂ ಮೂವರು ನಾಮಕರಣ ಸದಸ್ಯರನ್ನು ಹೊಂದಿರುವ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಂಗ್ರೆಸ್ ವಶವಾಗಿದೆ.

ಶಾಸಕ ಕೆ.ವೈ.ನಂಜೇಗೌಡ ಶುಭ ಹಾರೈಸಿ ಮಾತನಾಡಿ, ‘ಮಾಲೂರು ಎಪಿಎಂಸಿ 5 ವರ್ಷಗಳ ಅವದಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಗಳನ್ನು ನಡೆಸಿಕೊಂಡು ಬಂದಿದೆ. ಸುಮಾರು ₹5 ಕೋಟಿ ವೆಚ್ಚದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ಬಿಡುಗಡೆ ಮಾಡಿಸಲು ಸಹಕರಿಸಲಾಗುವುದು’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ಕೋಚಿಮುಲ್ ನೀದೇಶಕರಾದ ಕಾಂತಮ್ಮ ಸೋಮಣ್ಣ, ಸಿ.ಲಕ್ಷ್ಮಿನಾರಾಯಣ್, ಅಶ್ವಥ್ ರೆಡ್ಡಿ, ಮದುಸೂದನ್, ಪಟ್ಲಪ್ಪ, ಜಿ.ಎಂ.ಗೋವಿಂದ ರಾಜರೆಡ್ಡಿ, ಕೆ.ಎಚ್.ಕೃಷ್ಣಕುಮಾರ್, ಎಂ.ಪಿ.ಚಂದ್ರಶೇಖರ್, ಸಪ್ದಾರ್ ಬೇಗ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.